ಮಂಗಳೂರು: ಸಂಚರಿಸುತ್ತಿದ್ದ ರೈಲಿನಲ್ಲಿ ಕಳೆದು ಹೋಗಿದ್ದ ಚಿನ್ನಾಭರಣಗಳಿದ್ದ ವೃದ್ಧ ದಂಪತಿಯ ಟ್ರಾಲಿ ಬ್ಯಾಗ್ ನಗರದ ಕುಲಶೇಖರದಲ್ಲಿ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿದೆ. ಫೆ.27 ರಂದು ರವೀಂದ್ರ ಎಂ.ಶೆಟ್ಟಿ(74) ಹಾಗೂ ಅವರ ಪತ್ನಿ ಶಶಿಕಲಾ ಶೆಟ್ಟಿ(64) ರೈಲಿನಲ್ಲಿ ಮುಂಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಬ್ಯಾಗ್ ಕಳೆದುಕೊಂಡಿದ್ದರು. ಸುರತ್ಕಲ್‌ನಿಂದ ಮಂಗಳೂರು ನಡುವೆ ಅವರ ಟ್ರಾಲಿ ಬ್ಯಾಗ್ ಕಳೆದು ಹೋಗಿತ್ತು. ಬ್ಯಾಗ್ ಕಳವಾಗಿರುವ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.
ಟ್ರ್ಯಾಕ್ ಪ್ಯಾಟ್ರೋಲಿಂಗ್ ವೇಳೆ ಪತ್ತೆಯಾದ ಬ್ಯಾಗ್.. ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಮಂಗಳೂರು ರೈಲ್ವೆ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ರೈಲ್ವೆ ಸಿಬ್ಬಂದಿಯೊಂದಿಗೆ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಕುಲಶೇಖರ ಸುರಂಗದ ಬಳಿಯ ತಿರುವಿನಲ್ಲಿ ರೈಲು ಹಳಿ ಸಮೀಪ ಟ್ರಾಲಿ ಬ್ಯಾಗ್ ಪತ್ತೆಯಾಗಿದೆ. ಈ ಬ್ಯಾಗ್‌ನಲ್ಲಿ 245 ಗ್ರಾಂ ತೂಕದ ವಜ್ರ ಹಾಗೂ ಚಿನ್ನದ ಆಭರಣಗಳು ಸೇರಿದಂತೆ ಅಂದಾಜು 8,57,500 ರೂ. ಮೌಲ್ಯದ ಸ್ವತ್ತುಗಳಿದ್ದವು. ಈ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಠಾಣೆಗೆ ಬಂದು ಹಣವಿದ್ದ ಬ್ಯಾಗ್ ವಾರಸುದಾರರಿಗೆ ಒಪ್ಪಿಸಿದ ಆಟೋ ಚಾಲಕ: ಪ್ರಾಮಾಣಿಕತೆಗೆ ಮೆಚ್ಚುಗೆ
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ರಸ್ತೆ ಬದಿಯಲ್ಲಿ ಸಿಕ್ಕಿದ ಅಂದಾಜು 25 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ಆಟೋ ಚಾಲಕರೊಬ್ಬರು ಪೊಲೀಸರಿಗೆ ತಂದೊಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಇತ್ತೀಚೆಗೆ ನಡೆದಿತ್ತು. ಚಾಲಕನಿಗೆ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ, ಸನ್ಮಾನಿಸಿ ಗೌರವಿಸಿದ್ದಾರೆ. ಇಲ್ಲಿನ ಕಿದ್ವಾಯಿ ನಗರದ ನಿವಾಸಿ, ಇ-ರಿಕ್ಷಾ ಚಾಲಕ ಆಸ್ ಮೊಹಮ್ಮದ್ ಎಂಬುವರು ಮಂಗಳವಾರ ಮೋದಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ತಿಬ್ರಾ ರಸ್ತೆ ಬಳಿಯ ಕೊಳದ ದಡದಲ್ಲಿ ಬ್ಯಾಗ್‌ವೊಂದು ಅನಾಥವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಅಷ್ಟರಲ್ಲಿ ಪರಿಚಿತ ಸರ್ಫರಾಜ್ ಅಲಿ ಇದೇ ರಸ್ತೆಯಲ್ಲಿ ಹೋಗುತ್ತಿರುವುದನ್ನೂ ಗಮನಿಸಿದ್ದಾರೆ.
ನಂತರ ಇಬ್ಬರೂ ಸೇರಿಕೊಂಡು ಈ ಬ್ಯಾಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಮೋದಿ ನಗರ ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ. ಪೊಲೀಸರು ಬ್ಯಾಗ್ ತೆರೆದು ನೋಡಿದಾಗ 25 ಲಕ್ಷ ರೂಪಾಯಿ ಮೌಲ್ಯದ 500 ನೋಟುಗಳ 50 ಬಂಡಲ್ಗಳು ಪತ್ತೆಯಾಗಿವೆ. ಇಷ್ಟೊಂದು ದೊಡ್ಡ ಮೊತ್ತದ ಹಣ ತುಂಬಿದ್ದ ಬ್ಯಾಗ್ ತಂದೊಪ್ಪಿಸಿದ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಗಾಜಿಯಾಬಾದ್ ಗ್ರಾಮಾಂತರ ಡಿಸಿಪಿ ರವಿಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದ್ದರು.
ಇದನ್ನೂ ಓದಿ: ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ನಲ್ಲಿತ್ತು 25 ಲಕ್ಷ ರೂಪಾಯಿ: ಪೊಲೀಸರಿಗೆ ತಂದೊಪ್ಪಿಸಿದ ಆಟೋ ಚಾಲಕ!