ಬೆಳ್ತಂಗಡಿ: ಸಾರಿಗೆ ಸಂಸ್ಥೆಗಳು ಮುಳುತ್ತಿರುವ ಹಡಗಿನಂತಾಗಿ ನಷ್ಟದಲ್ಲಿದೆ. ಮುಳುಗುತ್ತಿರುವ ಸಂಸ್ಥೆಯನ್ನು ಎತ್ತಿ ಹಿಡಿಯಬೇಕಾದವರೇ ಮುಷ್ಕರ ಮಾಡುತ್ತಿರುವುದು ಸರಿಯಲ್ಲ. ಇದು ಮುಳುಗಿದರೆ ಅದರ ಅಪಕೀರ್ತಿ ಮುಷ್ಕರದಲ್ಲಿ ನಿರತರಾದವರಿಗೆ ಸಲ್ಲುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮುಷ್ಕರದ ಕುರಿತು ತಾಲೂಕಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಟೆಲ್‌ಗಳು, ಕಾರ್ಖಾನೆಗಳು, ಮಾರ್ಕೆಟ್ಗಳು ಮುಚ್ಚಿ ಹೋಗುತ್ತಿವೆ. ಅದರ ನಡುವೆ ಎಲ್ಲರಿಗೂ ಸಂಬಳ ಕಡಿತವಾಗಿದೆ. ಇವರು ಸಂಬಳ ಮಾತ್ರ ಜಾಸ್ತಿ ಮಾಡಿ ಅಂತ ಮುಷ್ಕರ ಮಾಡುತ್ತಿದ್ದಾರೆ. ಇದು ನ್ಯಾಯವೇ? ಧರ್ಮವಾ? ಎಂದು ಪ್ರಶ್ನಿಸಿದರು.
ನಾನು ಕೂಡಾ ಸಾರಿಗೆ ಸಚಿವನಾಗಿ ಕೆಲಸ ಮಾಡಿದವ. ಅದರ ಕಷ್ಟ ನನಗೆ ಗೊತ್ತಿದೆ. ಸುಖ ಬಂದಾಗ ಎಲ್ಲರೂ ಹಂಚಿ ತಿನ್ನೋಣ. ಈಗ ಕಷ್ಟ ಬಂದಿದೆ. ಸಂಬಳ ಕೊಡಲಿಕ್ಕಾಗದೇ ಬಹಳಷ್ಟು ರಾಜ್ಯಗಳು ಅಲ್ಲಿನ ಕಾರ್ಮಿಕರಿಗೆ ಶೇ. 60ರಷ್ಟು ಸಂಬಳ ಕೊಡುತ್ತಿವೆ. ಆದರೆ ನಮ್ಮ ಸರ್ಕಾರ ಎಲ್ಲಾ ಕಾರ್ಮಿಕರಿಗೂ ಪೂರ್ತಿ ಸಂಬಳ ಕೊಡುತ್ತಿದೆ. ಲಾಕ್ಡೌನ್ ಸಮಯದಲ್ಲಿ ಕೆಲಸಕ್ಕೆ ಬಾರದೇ ಇದ್ದರೂ ಕೂಡಾ ಸಂಬಳ ಕೊಟ್ಟಿದ್ದೇವೆ. ಈಗ ಇರೋ ಬರೋದ್ರಲ್ಲಿ ಸಾಲ ಮಾಡಿ ಸಂಬಳ ಕೊಡ್ತಾ ಇದ್ದೇವೆ. ಇಂತಹ ಸಂದರ್ಭದಲ್ಲೂ ಮುಷ್ಕರ ಮಾಡುತ್ತಿರುವುದು ಅವರಿಗೆ ಶೋಭೆಯಲ್ಲ ಎಂದರು.
ಸಾರಿಗೆ ನೌಕರರು ಜಿದ್ದಿಗೆ ಬಿದ್ದು ಯಾರದ್ದೋ ಮಾತನ್ನು ಕೇಳಿಕೊಂಡು ಈ ಸಂಸ್ಥೆಯನ್ನು ಹಾಳು ಮಾಡಬೇಡಿ. ಸಾರಿಗೆ ಸಂಸ್ಥೆ ಈಗಾಗಲೇ ನಷ್ಟದಲ್ಲಿ ಮುಳುಗುತ್ತಿದೆ. ನೀವು ಮತ್ತೆ ಅದಕ್ಕೆ ರಂಧ್ರ ತೋಡಿ ಇನ್ನಷ್ಟು ಮುಳುಗಿಸಬೇಡಿ. ಕಷ್ಟದಲ್ಲಿರುವ ಸಂಸ್ಥೆ ಮುಳುಗಿಸಬೇಡಿ. ಯಾರು ಮುಷ್ಕರ ಮಾಡುತ್ತಾರೋ ಅವರೇ ಇದರ ಅವನತಿಗೆ ಕಾರಣ ಆಗುತ್ತಾರೆ ಹೊರತು, ಸರ್ಕಾರ ಕಾರಣ ಅಲ್ಲ ಎಂದು ತಿಳಿಸಿದರು.
ಈಗಾಗಲೇ ಸಂಕಷ್ಟದಲ್ಲಿರುವ ಸಂಸ್ಥೆಗೆ ಹೊರೆ ಜಾಸ್ತಿಯಾಗಲಿದೆ. ಸಾವಿರಾರು ಜನರಿಗೆ ಉದ್ಯೋಗಕ್ಕೂ ಕುತ್ತು ಬರುತ್ತದೆ. ಸಂಸ್ಥೆ ಉಳಿಯಬೇಕಾದರೆ ಸರ್ಕಾರ ಮತ್ತು ನೌಕರರು ಜನರ ಪರವಾಗಿ ನಿಲ್ಲಬೇಕು. ಅದು ಬಿಟ್ಟು ಈ ರೀತಿ ವರ್ತಿಸೋದು ಸರಿಯಲ್ಲ. ಅರ್ಥ ಮಾಡಿಕೊಂಡು ಸರ್ಕಾರದೊಂದಿಗೆ ಕೈ ಜೋಡಿಸಿಬೇಕು ಎಂದರು.