ಮಂಗಳೂರು : ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗಿದೆ. ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶವಿದೆ. ಪರಿಣಾಮ ಜನರು ಪಡಿತರ ಸಾಮಗ್ರಿಗಳಿಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ.
ನಗರದ ಮಣ್ಣಗುಡ್ಡೆಯಲ್ಲಿರುವ ನ್ಯಾಯಬೆಲೆಯ ಅಂಗಡಿಯ ಮುಂಭಾಗ ಪಡಿತರ ಪಡೆಯಲು ಜನರು ಸಾಲಿನಲ್ಲಿ ನಿಂತಿದ್ದು, 11 ಗಂಟೆಯಾದರೂ ಜನರ ಸಂಖ್ಯೆ ಕಡಿಮೆಯಾಗಿರಲಿಲ್ಲ.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶವಿದೆ. ನ್ಯಾಯ ಬೆಲೆಯ ವಿತರಕರು ಜನರ ಸಾಲು ಕಂಡು ಮಾನವೀಯತೆಯ ದೃಷ್ಟಿಯಿಂದ ಬಂದವರಿಗೆ ಪಡಿತರ ವಿತರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ವ್ಯಾಕ್ಸಿನ್ ಲಭ್ಯತೆ ಇಲ್ಲ.. ದಾಸ್ತಾನು ಇಂದಿಗೆ ಮುಗಿಯಲಿದೆ : ಗೌರವ್ ಗುಪ್ತ
ಬೆಳಗ್ಗೆ 6 ಗಂಟೆಗೆ ನ್ಯಾಯಬೆಲೆ ಅಂಗಡಿಯನ್ನು ತೆರೆದರೂ ಕೂಡ 7 ಗಂಟೆಯವರೆಗೆ ಸರ್ವರ್ ಲಭ್ಯವಿರಲಿಲ್ಲ. ಆ ಬಳಿಕವೇ ಪಡಿತರ ವಿತರಣೆ ಮಾಡಲು ಪ್ರಾರಂಭಿಸಿದರು.
ಆದರೆ, ಪಡಿತರ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬರುವ ಕಾರಣ ಯಾರನ್ನೂ ಹಿಂದಕ್ಕೆ ಕಳುಹಿಸದೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕರು ತಿಳಿಸಿದ್ದಾರೆ.