ಪುತ್ತೂರು: 18ನೇ ವರ್ಷದ ಪುತ್ತೂರು ದಸರಾ ಮಹೋತ್ಸವಕ್ಕೆ ನವದುರ್ಗಾರಾಧನಾ ಸಮಿತಿ ಪುತ್ತೂರು ಸಹಯೋಗದೊಂದಿಗೆ ಸರಳ ರೀತಿಯಲ್ಲಿ ಇಂದು ಚಾಲನೆ ನೀಡಲಾಯಿತು.
ಸಂಪ್ಯ ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ಶಾಸಕ ಸಂಜೀವ ಮಠಂದೂರು ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಗಣಪತಿ ಸಹಿತ ನವ ದುರ್ಗೆಯರ ವಿಗ್ರಹ ಪೂಜೆ ನೆರವೇರಿಸಿದರು. 12 ದಿನಗಳು ನಡೆಯುವ ಪುತ್ತೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕೇವಲ ದೇವಿಯ ಆರಾಧನೆಗೆ ಸಂಬಂಧಿಸಿದ ಸಾಂಪ್ರದಾಯಗಳು ನಡೆಯಲಿದೆ.
ಈ ಬಗ್ಗೆ ಶಾಸಕ ಸಂಜೀವ ಮಠಂದೂರು ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ನವರಾತ್ರಿ ಉತ್ಸವ ಸಾಂಕೇತಿಕವಾಗಿ ದೇವಿಯರ ಅರಾಧನೆಗೆ ಮಾತ್ರ ಸೀಮಿತವಾಗಿದೆ. ಧಾರ್ಮಿಕ ಆಚರಣೆಗಳನ್ನ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅಗತ್ಯ. ಎಲ್ಲವೂ ಕೋವಿಡ್ ನಿಯಮಾನುಸರ ನಡೆಯಬೇಕು. ಕೋವಿಡ್ ಮುಕ್ತವಾದ ಬಳಿಕ ಮುಂದಿನ ವರ್ಷ ಮತ್ತೊಮ್ಮೆ ಗತ ವೈಭವ ಮರುಕಳಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಡಿಪಿ ನಾಮನಿರ್ದೇಶಿತ ಸದಸ್ಯ ವಿಜಯ ಬಿ.ಎಸ್, ಸೀತಾರಾಮ ರೈ ಕಂಬಳತಡ್ಡ, ಶಿಕ್ಷಕ ಉದಯ ರೈ, ಬಿಜೆಪಿ ಮುಖಂಡ ಸುರೇಶ್ ಆಳ್ವ, ಶಾಸಕರ ಆಪ್ತ ಸಹಾಯಕ ವಸಂತ ವೀರಮಂಗಲ ಸೇರಿದಂತೆ ಅರ್ಚಕರು, ಗ್ರಾಮಸ್ಥರು ಉಪಸ್ಥಿತರಿದ್ದರು.