ಪುತ್ತೂರು: ಪುತ್ತೂರು ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಕೆ. ಜೀವಂಧರ್ ಜೈನ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ವಿದ್ಯಾ ಆರ್ ಗೌರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಸಂಜೆ ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
31 ಸದಸ್ಯ ಸ್ಥಾನಗಳಿರುವ ಪುತ್ತೂರು ನಗರಸಭೆಯಲ್ಲಿ 25 ಬಿಜೆಪಿ, 5 ಕಾಂಗ್ರೆಸ್ ಹಾಗೂ ಓರ್ವ ಎಸ್‌ಡಿಪಿಐ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಜೀವಂಧರ್ ಜೈನ್ ಮತ್ತು ಕಾಂಗ್ರೆಸ್‌ನಿಂದ ರಾಬಿನ್ ತಾವ್ರೋ ಸ್ಪರ್ಧಿಸಿದ್ದರು. ಜೀವಂಧರ್ ಜೈನ್ ಅವರು ಶಾಸಕರ, ಸಂಸದದ ಮತಗಳು ಸೇರಿದಂತೆ ಒಟ್ಟು 27 ಮತಗಳನ್ನು ಪಡೆದು ವಿಜಯ ಸಾಧಿಸಿದರು.
ರಾಬಿನ್ ತಾವ್ರೋ ಅವರಿಗೆ 3 ಮತಗಳು ಲಭಿಸಿತು. ಕಾಂಗ್ರೆಸ್‌ನ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು. ಎಸ್‌ಡಿಪಿಐ ಸದಸ್ಯೆ ತಟಸ್ಥರಾಗಿದ್ದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನಿAದ ಯಾರೂ ಸ್ಪರ್ಧಿಸದ ಹಿನ್ನಲೆಯಲ್ಲಿ ಬಿಜೆಪಿಯ ವಿದ್ಯಾಗೌರಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜಕಾರಣದಲ್ಲಿ ಸ್ಪರ್ಧೆಗಳು ಸಹಜ ಅದರಂತೆ ಇಲ್ಲೂ ಸ್ಪರ್ಧೆ ನಡೆದಿದೆ. ಸಂವಿಧಾನದಲ್ಲಿ ವಿರೋಧ ಪಕ್ಷಗಳು ಎಂಬುದಿಲ್ಲ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಎಂದು ಮಾತ್ರವಿದೆ. ಇವೆರಡೂ ಒಂದಾಗಿ ಪುತ್ತೂರಿನ ಆಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಶಾಸಕ ಸಂಜೀವ ಮಠಂದೂರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷ ಕೆ. ಜೀವಂಧರ್ ಜೈನ್ ಹಾಗೂ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಮಾತನಾಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.