ಮಂಗಳೂರು: ವಿಶ್ವದಾದ್ಯಂತ ಭೀತಿ ಸೃಷ್ಟಿಸಿರುವ ಕೊರೊನಾ ವೈರಸ್ನಿಂದ ಜನರು ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಜನರು ತಮ್ಮ ಅಗತ್ಯದ ಸೇವೆಗಳಲ್ಲಿ ತೊಂದರೆಯಾದರೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲು ಕೊರೊನಾ ಅಡ್ಡಿಯಾಗಿದೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಮಂಗಳೂರು ಮಹಾನಗರ ಪಾಲಿಕೆ ತನ್ನ ಇಲಾಖೆಗಳಿಗೆ ಡಿಜಿಟಲ್ ಟಚ್ ನೀಡಿದೆ.
ಕೊರೊನಾ ವೈರಸ್ ಆರಂಭದಲ್ಲಿ ಪಾಲಿಕೆ ಮುಂಭಾಗದಲ್ಲಿ ಬಾಕ್ಸ್ಗಳನ್ನಿಟ್ಟು ಜನರಿಂದ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿತ್ತು. ಈಗ ಜನರು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಇಮೇಲ್, ವಾಟ್ಸಪ್, ಟ್ವಿಟರ್ ಮೂಲಕ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪಾಲಿಕೆಗೆ ವಾಟ್ಸಪ್, ಇಮೇಲ್, ಟ್ವಿಟರ್ ಮೂಲಕ ತಿಳಿಸಿದರೆ ಅದನ್ನು ಆಯಾ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹರಿಸಲು ಸೂಚಿಸಲಾಗುತ್ತದೆ.
ಮಂಗಳೂರು ಪಾಲಿಕೆಯ ಈ ನೂತನ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಕೊರೊನಾ ಭೀತಿ ದೂರವಾಗಿದ್ದು, ಬೇರೆ ಮಹಾನಗರ ಪಾಲಿಕೆಗಳಿಗೆ ಮಾದರಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.