ಪುತ್ತೂರು: ಅನಧಿಕೃತ ಅಂಗಡಿ, ಮನೆ ತೆರವು ಕಾರ್ಯಾಚರಣೆಯ ಸಂತ್ರಸ್ತರಿಗೆ ತಕ್ಷಣ ಸೂಕ್ತ ಪರಿಹಾರ ಮಂಜೂರು ಮಾಡಬೇಕು. ಇಲ್ಲವೇ ಸೂಕ್ತ ಜಾಗದಲ್ಲಿ ಅವರಿಗೆ ಅಂಗಡಿ ಕಟ್ಟಿಸಿಕೊಡಬೇಕು. 7 ದಿನಗಳಲ್ಲಿ ಈ ಪ್ರಕ್ರಿಯೆ ಆರಂಭಿಸದಿದ್ದಲ್ಲಿ, ಆಡಳಿತಶಾಹಿ ದುಂಡಾವರ್ತನೆ ವಿರುದ್ಧ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಡೆದ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ನರಿಮೊಗರು ಗ್ರಾ.ಪಂ. ಕಚೇರಿ ಎದುರು ಇಂದು ಕಾಂಗ್ರೆಸ್, ಡಿವೈಎಫ್‌ಐ, ಸಿಐಟಿಯು ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ನಡೆದ ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ತಾಲೂಕಿನ ನರಿಮೊಗರು ಮತ್ತು ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರದ ಕಾರ್ಯಾಚರಣೆಯಲ್ಲಿ, ಅನಧಿಕೃತ ಅಂಗಡಿಗಳನ್ನು ತೆರವು ನೆಪದಲ್ಲಿ ದಬ್ಬಾಳಿಕೆ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆಯಲಾಗಿದೆ. ಹಾಗಾಗಿ ತಕ್ಷಣ ಪರಿಹಾರ ಕೊಡಬೇಕು, ಇಲ್ಲವೇ ಅವರಿಗೆ ಸೂಕ್ತ ಜಾಗದಲ್ಲಿ ವ್ಯಾಪಾರ ಮಾಡಲು ಅಂಗಡಿ ನಿರ್ಮಿಸಿ ಕೊಡಬೇಕು. ತಪ್ಪಿದಲ್ಲಿ ಜಿಲ್ಲಾ ಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸುದ್ದಿಯನ್ನೂ ಓದಿ: 'ಸಚಿನ್ 5 ವರ್ಷ ಒಕ್ಕಲುತನ ಮಾಡಿ, ಆಮೇಲೆ ಕೃಷಿ ಕಾಯ್ದೆ ಬಗ್ಗೆ ಅಭಿಪ್ರಾಯ ತಿಳಿಸಲಿ'
ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಬಂದವರು ಸೇರಿ ಈ ನಿರ್ಧಾರ ಕೈಗೊಳ್ಳಬೇಕಿತ್ತು, ಆದರೆ ಅದಕ್ಕೆ ಮೊದಲೇ ಈ ದಬ್ಬಾಳಿಕೆ ನಡೆದಿದೆ. ನಾನು ಪುತ್ತೂರು ಶಾಸಕನಾಗಿದ್ದ ಸಂದರ್ಭದಲ್ಲೇ ಅಂಗಡಿ ಇಟ್ಟುಕೊಂಡಿದ್ದವರನ್ನು ಕೂಡಾ ಎಬ್ಬಿಸಲಾಗಿದೆ. ಅಂದರೆ ಸುಮಾರು 30 ವರ್ಷಗಳಿಂದ ಅಂಗಡಿ ವ್ಯಾಪಾರ ನಡೆಸುತ್ತಿದ್ದವರೂ ಬೀದಿಪಾಲಾಗಿದ್ದಾರೆ. ಹಾಗಾದರೆ ಇಲ್ಲಿ ಯಾವ ಕಾನೂನು ಜಾರಿಯಲ್ಲಿದೆ ಎಂದು ಪ್ರಶ್ನಿಸಿದರು.