ಉಳ್ಳಾಲ (ತೊಕ್ಕೊಟ್ಟು): ಸರ್ಕಾರಿ ಆಸ್ಪತ್ರೆ ಬಲಪಡಿಸಿ, ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಎಂಬ ಅಭಿಯಾನದ ಭಾಗವಾಗಿ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜ್ ಕೊಡಿ ಮತ್ತು ಎಲ್ಲಾ ಕೊರೊನಾ ಸೋಂಕಿತರಿಗೆ ಉಚಿತ ಗುಣಮಟ್ಟದ ಚಿಕಿತ್ಸೆ ನೀಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲೆಯ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಯ ಹೆಸರಿನಲ್ಲಿ ರೋಗಿಗಳಿಂದ ಲೂಟಿ ಮಾಡುತ್ತಿವೆ. ಈ ಬಗ್ಗೆ ಧ್ವನಿ ಎತ್ತಬೇಕಿದ್ದ ಜಿಲ್ಲಾಡಳಿತ ಮೌನವಾಗಿದೆ. ಇನ್ನು ಗ್ರಾಮಾಂತರ ಪ್ರದೇಶದಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಖಾಸಗಿ ಕಾಲೇಜಿನಲ್ಲಿ ಓದಿದ ವೈದ್ಯಕೀಯ ವಿದ್ಯಾರ್ಥಿಗಳು ತಿಂಗಳಿಗೆ ಅರವತ್ತು ಸಾವಿರ ಸಂಬಳ ಕೊಟ್ಟರೂ ಇಲ್ಲಿ ಕೆಲಸಕ್ಕೆ ಬರುತ್ತಿಲ್ಲ ಎಂದು ಜಿಲ್ಲೆಯ ವೈದ್ಯಾಧಿಕಾರಿಗಳೇ ಹೇಳುತ್ತಾರೆ.
ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಅನುಮತಿ ಕೊಟ್ಟ ಸರ್ಕಾರ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಕೊಟ್ಟಿದ್ದರೆ ಬಡವರ ಮಕ್ಕಳು ವೈದ್ಯರಾಗಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಸರ್ಕಾರಕ್ಕೆ ಅದು ಬೇಕಿಲ್ಲ. ಅವರು ಶ್ರೀಮಂತ ಮೆಡಿಕಲ್ ಕಾಲೇಜು ಧಣಿಗಳ ಹಿತ ಕಾಯುವಲ್ಲಿಯೇ ಬ್ಯುಸಿಯಾಗಿದ್ದಾರೆ ಎಂದರು.