ಪುತ್ತೂರು: ಮಂಗಳೂರಿನ ಯುವ ವಕೀಲ ಕುಲ್‌ದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಪುಂಜಾಲಕಟ್ಟೆ ಠಾಣಾಧಿಕಾರಿ ಮತ್ತು ಇತರ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ವಕೀಲರ ಸಂಘದ ಸದಸ್ಯರು ಇಂದು ನಗರದ ತಾಲೂಕಾಡಳಿತ ಸೌಧದೆದುರು ಪ್ರತಿಭಟನೆ ನಡೆಸಿದರು. ಬಳಿಕ, ಸಹಾಯಕ ಕಮೀಷನರ್ ಕಚೇರಿಯ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಮಾತನಾಡಿ, ಏಕಾಏಕಿ ಮನೆಗೆ ಆಗಮಿಸಿದ ಪೊಲೀಸರು ವಕೀಲ ಕುಲದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ. ಶಿಷ್ಟಾಚಾರ ತೋರದೆ ಅವರ ತಂದೆ ತಾಯಿ ಮೇಲೂ ಕೈ ಮಾಡಿ, ಉಟ್ಟ ಬಟ್ಟೆಯಲ್ಲೇ ಕುಲದೀಪ್ ಶೆಟ್ಟಿಯವರನ್ನು ಠಾಣೆಗೆ ಕರೆತಂದು ಮತ್ತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಪೊಲೀಸರ ಈ ವರ್ತನೆಯನ್ನು ಪುತ್ತೂರು ವಕೀಲರ ಸಂಘ ಖಂಡಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಜಯಾನಂದ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್, ಖಜಾಂಜಿ ಶ್ಯಾಮಪ್ರಸಾದ್ ಕೈಲಾರ್ ಮತ್ತಿತರ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪುತ್ತೂರಿನಲ್ಲಿ ಮಕ್ಕಳ ಸಂವಾದ: ಮಕ್ಕಳದ್ದು ಪ್ರಾಂಜಲವಾದ ಮನಸ್ಸು: ಶಾಸಕ ಸಂಜೀವ ಮಠಂದೂರು