ಪುತ್ತೂರು(ದಕ್ಷಿಣ ಕನ್ನಡ): ಅಕ್ಷರದಾಸೋಹವನ್ನು ಖಾಸಗೀಕರಣಗೊಳಿಸಬಾರದು. ಅವರನ್ನು ಒಂದೇ ಕಡೆ ಕೇಂದ್ರಿಕೃತಗೊಳಿಸಿ ದುಡಿಸಬಾರದು. ಜೊತೆಗೆ ಬಿಸಿಯೂಟ ಸಿಬ್ಬಂದಿಗೆ ಕಳೆದ ಏಪ್ರಿಲ್‌ನಿಂದ ಕೋವಿಡ್ ಅವಧಿಯ 10,000 ರೂಪಾಯಿ ಪರಿಹಾರ ಹಾಗೂ ವೇತನ ನೀಡುವಂತೆ ಸಿಐಟಿಯುನ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ತಾಲೂಕು ಸಮಿತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗಸ್ಟ್7ರಂದು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯುನ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಅಕ್ಷರ ದಾಸೋಹ ನೌಕರರಿಗೆ ತಿಂಗಳಿಗೆ 21,000 ರೂಪಾಯಿ ವೇತನ ಹಾಗೂ ನಿವೃತ್ತಿ ಬಳಿಕ ಮಾಸಿಕ 10,000 ರೂಪಾಯಿ ಪಿಂಚಣಿ ನಿಗದಿಗೊಳಿಸಬೇಕು ಎಂಬ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಿಐಟಿಯು ನಿರಂತರ ಹೋರಾಟ ಮಾಡುತ್ತಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದರು.
ಕೋವಿಡ್-19ನಿಂದ ದೇಶದಲ್ಲಿ ಕೋಟ್ಯಂತರ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅದರಿಂದ ಅಕ್ಷರ ದಾಸೋಹ ಸಿಬ್ಬಂದಿಯೂ ಹೊರತಾಗಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡಿ ಅವರನ್ನು ರಕ್ಷಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂದು ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ, ಬಂಡವಾಳ ಶಾಹಿಗಳಿಗೆ, ಕಂಪನಿಗಳಿಗೆ ಸಹಾಯವಾಗುವ ಕಾನೂನುಗಳನ್ನು ಮಾಡುತ್ತಿವೆ. ಕೇಂದ್ರ ಸರ್ಕಾರ ಕೇವಲ ಕಾರ್ಮಿಕ ವಿರೋಧಿ ನೀತಿಗಳನ್ನೇ ಜಾರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ರಾಜ್ಯದಲ್ಲಿ1,40,000 ಅಕ್ಷರ ದಾಸೋಹ ಸಿಬಂದಿಯಿದ್ದಾರೆ. ಕಳೆದ ಕೋವಿಡ್-19 ಲಾಕ್‌ಡೌನ್ ಪ್ರಾರಂಭವಾದ ಬಳಿಕ ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ. 2 ಲಕ್ಷ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಅವರಿಗೆ ಈ ತನಕ ನಯಾಪೈಸೆ ಪರಿಹಾರ ದೊರೆತ್ತಿಲ್ಲ. ಅತ್ತ ಕೆಲಸವೂ ಇಲ್ಲದೆ ಇತ್ತ ಪರಿಹಾರವೂ ಇಲ್ಲದೆ ಅವರು ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಈ ಹಿನ್ನೆಲೆ ಅವರಿಗೆ ಏಪ್ರೀಲ್ ನಂತರ ವೇತನ ಹಾಗೂ ತಿಂಗಳಿಗೆ ರೂ. 6000ದಂತೆ ಕೋವಿಡ್ ಪರಿಹಾರವನ್ನು ಏಕಗಂಟಿನಲ್ಲಿ ನೀಡಬೇಕು. ಇಲ್ಲವಾದರೆ ಅಕ್ಷರ ದಾಸೋಹ ಸಿಬಂದಿ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಈ ವೇಳೆ ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ಶ್ರೀಮತಿ, ಪ್ರಧಾನ ಕಾರ್ಯದರ್ಶಿ ಹೇಮಲತಾ, ಸದಸ್ಯರಾದ ರತಿ ಕೆ ರೈ, ಶಕುಂತಲಾ, ವೇದಾವತಿ, ರೇಷ್ಮಾ, ಗೀತಾ ಹಾಗೂ ಲಕ್ಷ್ಮಿ ಹಾಗೂ ಮೊದಲಾದವರು ಪ್ರತಿಭಟನೆಯಲ್ಲಿದ್ದರು.