ಮಂಗಳೂರು: ಸುಮಾರು 25 ವರ್ಷಗಳ ಹಿಂದೆ ನಗರದ ಪಣಂಬೂರು ಬಂದರು ಪ್ರದೇಶದಲ್ಲಿ ಕಾರೊಂದು ಭೀಕರ ಅಪಘಾತಕ್ಕೀಡಾಗಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಆ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದ ವ್ಯಕ್ತಿಯ ನಿಸ್ವಾರ್ಥ ಸೇವೆಯನ್ನು ಮರೆಯದ ಆ ದಂಪತಿಯ ಮಕ್ಕಳು ತಮ್ಮ ಹೆತ್ತವರ ಪ್ರಾಣ ಉಳಿಸಿದವರನ್ನು 25 ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅಲ್ಲದೆ, ಇತ್ತೀಚೆಗೆ ನಡೆದ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿದ್ದಾರೆ.
25 ವರ್ಷಗಳ ಹಿಂದೆ ಸೀತಾರಾಮ್ ಶೆಟ್ಟಿ ಎಂಬವರು ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಣಂಬೂರು ಬಂದರು ಬಳಿ ಸಾಗುತ್ತಿದ್ದ ಸಂದರ್ಭ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ದಂಪತಿ ಕಾರಿನಿಂದ ಹೊರಗೆಸೆಯಲ್ಪಟ್ಟಿದ್ದರು. ಲಾರಿ ಚಾಲಕ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ. ಆ ಕಾರಿನ ಹಿಂದೆಯೇ ಇನ್ನೊಂದು ಕಾರಿನಲ್ಲಿದ್ದ ಶರೀಫ್ ಎಂಬವರು ತಕ್ಷಣ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದರು. ಕೂಡಲೇ ಶರೀಫ್ ಆ್ಯಂಬುಲೆನ್ಸ್ಗೆ ಕರೆ ಮಾಡಿ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು.
![Mangalore](https://etvbharatimages.akamaized.net/etvbharat/prod-images/kn-mng-01-felicity-after-25years-script-ka10015_22062020093527_2206f_1592798727_812.jpg)
ಆ ಬಳಿಕ ಶರೀಫ್ ಈ ಘಟನೆಯನ್ನು ಸಂಪೂರ್ಣ ಮರೆತಿದ್ದರು. ಆದರೆ ಆ ಕುಟುಂಬ ಇವರ ಮಾನವೀಯ ಕಾರ್ಯವನ್ನು ಮರೆತಿರಲಿಲ್ಲ. ಸೀತಾರಾಮ ಶೆಟ್ಟರು ಸಾಕಷ್ಟು ಸಲ ತಮ್ಮನ್ನು ಭೇಟಿಯಾಗುವಂತೆ ಶರೀಫ್ ಅವರಿಗೆ ಬೇರೆಯವರಲ್ಲಿ ಹೇಳಿ ಕಳುಹಿಸುತ್ತಿದ್ದರು. ಆದರೆ ಅವರು ಹೋಗಿರಲಿಲ್ಲ. 2 ವರ್ಷಗಳ ಹಿಂದೆ ಮದುವೆ ಕಾರ್ಯಕ್ರಮವೊಂದಕ್ಕೆ ಅವರ ಪುತ್ರ ಡಾ. ಕಿಶೋರ್ ಶೆಟ್ಟಿ ಮತ್ತವರ ಪತ್ನಿ ಬಂದಿದ್ದರು. ಆಗ 25 ವರ್ಷಗಳ ಹಿಂದಿನ ಘಟನೆಯ ಬಗ್ಗೆ ಮತ್ತೆ ನೆನಪಾಯಿತು.
ಜೂನ್ 18ರಂದು ಸೀತಾರಾಮ ಶೆಟ್ಟಿ ದಂಪತಿಯ 50 ನೇ ವಿವಾಹ ವಾರ್ಷಿಕೋತ್ಸವಕ್ಕೆ ಶರೀಫ್ ಅವರಿಗೆ ಕುಟುಂಬ ಸಮೇತ ಹಾಜರಾಗಲು ಕರೆ ಬಂದಿತ್ತು. ಅದರಂತೆ ಶರೀಫ್ ಅವರು ಸಮಾರಂಭಕ್ಕೆ ಹಾಜರಾಗಿದ್ದರು. ಆದರೆ ಅಲ್ಲಿ ಶರೀಫ್ ಅವರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ 25 ವರ್ಷದ ಹಿಂದಿನ ಮಾನವೀಯ ಕಾರ್ಯವನ್ನು ನೆನಪಿನಲ್ಲಿಟ್ಟುಕೊಂಡ ಸೀತಾರಾಮ ಶೆಟ್ಟಿಯವರ ಮಕ್ಕಳು ಶರೀಫ್ ದಂಪತಿಯನ್ನು ಸನ್ಮಾನಿಸಿದ್ದಾರೆ.
ಈ ಮೂಲಕ ಆ ಜಾತಿ ಈ ಜಾತಿ ಎಂದು ಕಚ್ಚಾಡುತ್ತಿರುವ ಕಾಲದಲ್ಲಿ ಶರೀಫ್ ಅವರ ನಿಸ್ವಾರ್ಥ ಸೇವೆಯನ್ನು 25 ವರ್ಷದ ಬಳಿಕವೂ ನೆನಪಿನಲ್ಲಿರಿಸಿ ಸನ್ಮಾನಿಸಿದ ಸೀತಾರಾಮ ಶೆಟ್ಟಿಯವರ ಕುಟುಂಬದ ಕೃತಜ್ಞತಾ ಭಾವನೆಯನ್ನು ಮೆಚ್ಚಲೇಬೇಕು.