ಮಂಗಳೂರು: ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಹಲವರಿಗೆ ತೊಂದರೆಯಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದ್ದರಿಂದ ನಾಳೆ ಕಂದಾಯ ಸಚಿವರು ನಗರಕ್ಕೆ ಆಗಮಿಸುತ್ತಿದ್ದು ಅವರ ಗಮನಕ್ಕೆ ಈ ವಿಷಯವನ್ನು ತರಲಾಗುವುದು ಮತ್ತು ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ನಗರದ ಮಿನಿ ವಿಧಾನಸೌಧದ ಬಳಿ ಇರುವ ಪ್ರಾಪರ್ಟಿ ಕಾರ್ಡ್ ನೋಂದಣಿ ಕಚೇರಿಗೆ ಆಗಮಿಸಿದ ಅವರು ಭೂ ದಾಖಲೆಯ ಸಹಾಯಕ ನಿರ್ದೇಶಕಿ (ಎಡಿಎಲ್ ಆರ್) ಪ್ರಸಾದಿನಿ ಅವರ ಬಳಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲರೂ ಪ್ರಾಪರ್ಟಿ ಕಾರ್ಡ್ ಹೊಂದುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 1,53,000 ಪ್ರಾಪರ್ಟಿ ಕಾರ್ಡ್ ಮಾಡುವ ಗುರಿ ಹೊಂದಿದ್ದು, ಈಗಾಗಲೇ 41 ಸಾವಿರ ಜನರಿಗೆ ಕಾರ್ಡ್ ನೀಡಲಾಗಿದೆ. ಈಗಾಗಲೇ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಲಾಗಿದ್ದು, ಆ ಬಳಿಕ ಒಂದು ವಾರದೊಳಗೆ 22 ರಿಜಿಸ್ಟ್ರೇಷನ್ ಆಗಿದೆ. ಈಗಾಗಲೇ 34 ಸರ್ವೇಯರ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಮಂಗಳೂರಿನ ಜನಸಂಖ್ಯೆಯ ಆಧಾರದ ಮೇಲೆ ಇನ್ನೂ ಸರ್ವೇಯರ್ ಗಳ, ಕಂಪ್ಯೂಟರ್, ಸಿಬ್ಬಂದಿಯ ಅಗತ್ಯವಿದೆ ಈ ಬಗ್ಗೆ ನಾಳೆ ಕಂದಾಯ ಸಚಿವರಿಗೆ ವರದಿ ನೀಡಲಾಗುವುದು ಎಂದು ಐವನ್ ಡಿಸೋಜ ಹೇಳಿದರು.