ಬೆಳ್ತಂಗಡಿ: ಕೋವಿಡ್ ನಿಯಂತ್ರಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸೇವಾ ಕಾರ್ಯ ಶ್ಲಾಘನೀಯ. ಈಗಾಗಲೇ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿರುವುದಲ್ಲದೇ ಎಲ್ಲಾ ರೀತಿಯ ಸಹಕಾರ ನೀಡಲು ಸಮ್ಮತಿ ಸೂಚಿಸಿದ್ದಾರೆ. ಉಜಿರೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಧರ್ಮಸ್ಥಳದ ರಜತಾದ್ರಿ ಕಟ್ಟಡವನ್ನು ಕೋವಿಡ್ ಸೆಂಟರ್‌ಗೆ ನೀಡಲು ಉದ್ದೇಶಿಸಿದ್ದಾರೆ. ಅಲ್ಲದೇ ರಾಜ್ಯದ ಹಲವು ಕಡೆ ಕೋವಿಡ್‌ಗಾಗಿ ಸೌಲಭ್ಯ ಒದಗಿಸಿದ್ದು ಇದಕ್ಕೆ ಸರ್ಕಾರದ ಪರವಾಗಿ ಡಾ.ಹೆಗ್ಗಡೆಯವರನ್ನು ಅಭಿನಂದಿಸುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-19 ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಹೆಚ್ಚುವರಿ 50 ಬೆಡ್- 1 ಆಕ್ಸಿಜನ್ ಪ್ಲಾಂಟ್‌ಗೆ ಮನವಿ:
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ಗೆ ಸಂಬಂಧಿಸಿ 20 ಹಾಸಿಗೆ ಇದ್ದು, ಹೆಚ್ಚುವರಿ 10 ಹಾಸಿಗೆ ಇಡಲಾಗಿದೆ. ಇನ್ನು 50 ಹಾಸಿಗೆಯನ್ನು ನೀಡಿದರೆ ಉತ್ತಮ. ಇಲ್ಲಿಯೇ ಒಂದು ಆಕ್ಸಿಜನ್ ಪ್ಲಾಂಟ್‌ಗೆ ಅವಕಾಶ ಮಾಡಿಕೊಡಬೇಕು. ವೆಂಟಿಲೇಟರ್ ಇರುವ ಅಂಬುಲೆನ್ಸ್ ಕೂಡಾ ಅಗತ್ಯವಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನಳಿನ್ ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡಿದರು.
ಮನವಿಗೆ ಉತ್ತಮ ಸ್ಪಂದನೆ:
ಶಾಸಕ ಹರೀಶ್ ಪೂಂಜ ಅವರ ಮನವಿಗೆ ಸ್ಪಂದಿಸಿದ ನಳೀನ್ ಕುಮಾರ್ ಕಟೀಲ್, ಹೆಚ್ಚುವರಿಯಾಗಿ 50 ಹಾಸಿಗೆಗಳನ್ನು ಸಿಆರ್‌ಎಸ್ ಮೂಲಕ ಕುದುರೆಮುಖ ಕಂಪೆನಿಯಿಂದ ನೀಡಲಾಗುತ್ತದೆ. ಅಲ್ಲದೇ ಗೇಲ್ ಕಂಪೆನಿಯಿಂದ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ನೀಡಲಾಗುವುದು ಎಂದು ಭರವಸೆ ನೀಡಿದರು.
6 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂಗೆ ಪ್ರಸ್ತಾಪ:
ಸಾರ್ವಜನಿಕರು, ಸಂಘಸಂಸ್ಥೆಗಳು ಹಾಗೂ ಇನ್ನಿತರರ ಅಭಿಪ್ರಾಯದಂತೆ 6 ದಿನಗಳ ಸಂಪೂರ್ಣ ಕರ್ಫ್ಯೂ ಮಾಡಿದರೆ ಉತ್ತಮ. ಜಿಲ್ಲಾಡಳಿತ ಇದಕ್ಕೆ ಸಾಥ್ ಕೊಡಬೇಕು ಎಂದು ಶಾಸಕ ಹರೀಶ್ ಪೂಂಜ ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಂಎಲ್‌ಸಿ ಹರೀಶ್ ಕುಮಾರ್ ಅವರು, ಕೆಲವೊಂದಕ್ಕೆ 6 ರಿಂದ 10 ಗಂಟೆ, 6 ರಿಂದ 12ಗಂಟೆ, 6 ರಿಂದ ಸಂಜೆ 6ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆಡಳಿತ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಚೈನ್ ಲಿಂಕ್ ಬ್ರೇಕ್ ಮಾಡಿದಷ್ಟು ನಿಯಂತ್ರಣ ಸಾಧ್ಯ. ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಪ್ರಸ್ತಾಪವಾದ 6 ದಿನಗಳ ಸಂಪೂರ್ಣ ಕರ್ಫ್ಯೂ ಕುರಿತು ಚಿಂತಿಸಲು ಎರಡು ದಿನ ಅವಕಾಶ ಕೊಡಿ. ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ಕರೆದು, ಜಿಲ್ಲಾಡಳಿತ ಹಾಗೂ ಸಿಎಂ ಬಳಿ ಮಾತನಾಡಿ ಮುಂದಿನ ನಡೆಯ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಖಾಸಗಿ ಕ್ಲಿನಿಕ್ ಬಗ್ಗೆಯೂ ಗಮನ ಹರಿಸಿ: ಡಿಸಿ
ತಾಲೂಕಿನ ಪ್ರತಿಯೊಂದು ಪಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಕ್ಲಿನಿಕ್ ಕಡೆ ಗಮನ ನೀಡಬೇಕು. ಜ್ವರ, ಶೀತ, ಕೆಮ್ಮು ಮೊದಲಾದ ಕಾಯಿಲೆಗಳಿಗೆ ಔಷಧ ತೆಗೆದುಕೊಂಡು ಮನೆಯಲ್ಲಿರುತ್ತಾರೆ. ಪ್ರತಿ ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸಿ ಗಂಟಲದ್ರವ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸಬೇಕು. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಎಲ್ಲಾ ಮೆಡಿಕಲ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಆಕ್ಸಿಜನ್ ದುರಂತದ ಬೆನ್ನಲ್ಲೇ ಬೆಡ್ ಕೊರತೆ... ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬಗೆಹರಿಯದ ಸಮಸ್ಯೆ
ಹೀಗೆ ಕೋವಿಡ್ ಸ್ಥಿತಿಗತಿ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ದೀರ್ಘ ಚರ್ಚೆ ನಡೆದಿದೆ.