ಮಂಗಳೂರು: ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದು, ಸರ್ಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಐಪಿಸಿ 420 ಅಡಿ ಕ್ರಿಮಿನಲ್ ಕೇಸು ದಾಖಲಿಸಲು ರಾಜ್ಯ ಸರ್ಕಾರದ ಕಂದಾಯ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.
ದ.ಕ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಕಾರ್ಡ್ ಪಡೆದಿರುವುದು ಅಕ್ಷಮ್ಯ ವಂಚನೆಯಾಗಿದೆ. ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಈಗಾಗಲೇ ಗಡುವು ನೀಡಲಾಗಿದೆ. ಆದರೂ ಮತ್ತೊಮ್ಮೆ ಅವಕಾಶ ನೀಡಿ ಕೂಡಲೇ ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸಂಬಂಧ ಪಟ್ಟ ಕಚೇರಿಗೆ ಹಿಂದಿರುಗಿಸಬೇಕು. ಹಿಂದಿರುಗಿಸದೇ ಇದ್ದಲ್ಲಿ ಅಂತಹವರ ಕುಟುಂಬಗಳನ್ನು ಪತ್ತೆ ಮಾಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಗಳು, ಬೆಳ್ತಂಗಡಿ ತಾಲೂಕಿನ ಕೆಲವೆಡೆ ಸಂತ್ರಸ್ತರ ಮನೆ ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಕರಾರು ಎತ್ತಿರುವುದಕ್ಕೂ ಅಸಮಾಧಾನ ಸೂಚಿಸಿದರು. ಸಂತ್ರಸ್ತರ ಬದುಕು ಪುನರ್ ನಿರ್ಮಾಣದಲ್ಲಿ ಸರಕಾರ ನಿರಂತರವಾಗಿ ತೊಡಗಿಸಿದ್ದು, ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ನೆರೆ ಹಾವಳಿಯಲ್ಲಿ ಫಲಾನುಭವಿಗಳಿಗೆ ಆದಷ್ಟು ಬೇಗ ಪರಿಹಾರ ದೊರಕುವಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ತರಬೇತಿ ಐಎಎಸ್ ಅಧಿಕಾರಿ ರಾಹುಲ್ ಸಿಂಧ್ಯಾ, ಡಿಸಿಪಿ ಅರುಣಾಂಶು ಗಿರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.