ಕಡಬ: ಕಡಬ - ಪಂಜ ರಾಜ್ಯ ಹೆದ್ದಾರಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಕುರಿತಾದ 'ಈಟಿವಿ ಭಾರತ'ದ ವರದಿಗೆ ಸ್ಪಂದಿಸಿರುವ ಸುಳ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಕಡಬದಿಂದ ಪಂಜ ಮೂಲಕ ಸುಳ್ಯ, ಕೇರಳ, ಮಡಿಕೇರಿಗೆ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದ್ದು, ಸೂಕ್ತ ದುರಸ್ತಿ ಇಲ್ಲದ ಹಿನ್ನೆಲೆ ಅಪಘಾತಗಳಿಗೆ ಎಡೆಮಾಡಿಕೊಡುತ್ತಿತ್ತು. ಕಳೆದ ವಾರ ಇಲ್ಲಿನ ಮೊರಚೆಡಾವು ಎಂಬಲ್ಲಿ ಪಿಕಪ್ ವಾಹನ ಮತ್ತು ರಿಕ್ಷಾ ಡಿಕ್ಕಿಯಾಗಿ ಮಗುವೊಂದು ಮೃತಪಟ್ಟಿತ್ತು. ತಿರುವುಗಳ ಸೂಚನಾ ಫಲಕ, ವೇಗದ ಮಿತಿ ಫಲಕ ಅಳವಡಿಸಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜೊತೆಗೆ ಕಲ್ಲಂತಡ್ಕ ಎಂಬಲ್ಲಿ ಇರುವ ಸೇತುವೆಯ ತಡೆಗೋಡೆಗಳು ಕುಸಿದಿದ್ದು, ಅಪಾಯ ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಡಬ ರಸ್ತೆ ಸಮಸ್ಯೆ.. ಆಸ್ಪತ್ರೆಗೆ ಅನಾರೋಗ್ಯ ಪೀಡಿತ ವೃದ್ಧೆ ಹೊತ್ತು ಸಾಗಿದ ಗ್ರಾಮಸ್ಥರು
ಇನ್ನೊಂದೆಡೆ, ಕಡಬದಿಂದ ಒಂತ್ರಡ್ಕ ಶಾಲೆಯ ವರೆಗಿನ ರಸ್ತೆ ಗುಂಡಿಗಳಿಂದ ಕೂಡಿದೆ. ಈ ಕುರಿತು ಸುಳ್ಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರ್ ಅವರನ್ನು 'ಈಟಿವಿ ಭಾರತ' ಪ್ರತಿನಿಧಿ ಮಾತನಾಡಿಸಿದಾಗ, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.
ಅಧಿಕಾರಿಗಳಿಗೆ ಧನ್ಯವಾದ.. ಈಟಿವಿ ಭಾರತ ವರದಿಗೆ ಸ್ಪಂದಿಸಿ ಜನರು ಎದುರಿಸುತ್ತಿರುವ ರಸ್ತೆ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಲ್ಪಿಸುವ ಭರವಸೆ ನೀಡಿದ ಸುಳ್ಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರ್ ಅವರಿಗೆ ಧನ್ಯವಾದ ತಿಳಿಸುತ್ತೇವೆ.