ಕೊಡಗು : ಕಳೆದ ಜೂನ್ ತಿಂಗಳಲ್ಲಿ ಮಹಾಮಳೆಗೆ ಹಲವು ಕುಟುಂಬಗಳು ಸೂರನ್ನು ಕಳೆದುಕೊಂಡಿದ್ದವು. ಅವುಗಳಲ್ಲಿ ಸೋಮವಾರಪೇಟೆ ತಾಲೂಕಿನ ಜಂಬೂರು ಒಂದು. ವರ್ಷದ ಹಿಂದೆ ವಾಸಿಸಲು ಸೂರಿಲ್ಲದೆ, ಇನ್ನೂ ಕೆಲವರು ಬಿರುಕು ಬಿಟ್ಟ ಗೋಡೆಗಳ ಮನೆಯಲ್ಲೇ ಆತಂಕದಲ್ಲೇ ಕಾಲಕಳೆಯುತ್ತಿದ್ದರು.
ಇಂತಹ ಸಂದರ್ಭದಲ್ಲಿ ಅವರ ಬಾಳಿನಲ್ಲಿ ಭರವಸೆಯ ಬೆಳಕಾಗಿ ಬಂದಿದ್ದು ರೋಟರಿ ಸಂಸ್ಥೆ. 'ರೀಬಿಲ್ಡ್ ಕೊಡಗು' ಎಂಬ ಯೋಜನೆಯಡಿ ಪ್ರಾಕೃತಿಕ ವಿಕೋಪಕ್ಕೆ ನಲುಗಿದ್ದ ಸುಮಾರು 25 ನಿರಾಶ್ರಿತರಿಗೆ ವ್ಯವಸ್ಥಿತ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಒಂದು ಮಲಗುವ ಕೊಠಡಿ, ಅಡಿಗೆ ಮನೆ ಒಳಗೊಂಡಂತೆ ಮೂಲಸೌಕರ್ಯ ಕಲ್ಪಿಸಿ ನಿರಾಶ್ರಿತರಿಗೆ ಹಸ್ತಾಂತರ ಮಾಡಿದೆ.
ಮಳೆಗೆ ಮನೆ ಕುಸಿದಾಗ ಮಗುವಿಗೆ 5 ತಿಂಗಳಾಗಿತ್ತು. ಅಂತಹ ಸ್ಥಿತಿಯಲ್ಲಿ ರೋಟರಿ ನೆರವಿಗೆ ಬಂದು ಮನೆ ನಿರ್ಮಿಸಿದೆ. ಈ ಮನೆಗಳಲ್ಲಿ ಎಲ್ಲಾ ತರಹದ ಸೌಲಭ್ಯಗಳವೆ. ಎಲ್ಲಕ್ಕಿಂತ ಮಿಗಿಲಾಗಿ ಕಳೆದುಕೊಂಡ ಹೆಂಚಿನ ಮನೆಗೆ ಪರ್ಯಾಯವಾಗಿ ಕಾಂಕ್ರಿಟ್ ಮನೆ ಪಡೆದಿರುವುದು ಸಂತೋಷವಾಗಿದೆ. ಇದೇ ರೀತಿ ನಿರಾಶ್ರಿತರಿಗೆ ನಿವೇಶನಗಳನ್ನು ಸಂಸ್ಥೆ ನಿರ್ಮಿಸಿಕೊಡಲಿ ಎನ್ನುತ್ತಾರೆ ಫಲಾನುಭವಿ ಸುಮತಿ.
ಒಂದು ಮನೆಗೆ ತಲಾ 5 ಲಕ್ಷದಂತೆ ಆ್ಯಬಿಟೈಡ್ ಹ್ಯುಮ್ಯಾನಿಟಿ ಫಾರ್ ಇಂಡಿಯಾ ಎಂಬ ಅಂತರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ಸುಮಾರು 25 ಉತ್ತಮ ಗುಣಮಟ್ಟದ ಮನೆಗಳನ್ನು ನಿರಾಶ್ರಿತ ಫಲಾನುಭವಿಗಳಿಗೆ ಇಂದು ಹಸ್ತಾಂತರಿಸಿದ್ದೇವೆ. ಮನೆಗಳು 320 ಚದರ ವಿಸ್ತೀರ್ಣ ಹೊಂದಿದ್ದು, ಒಂದು ರೂಮ್, ಒಂದು ಮಲಗುವ ಕೊಠಡಿ, ಶೌಚಾಲಯವಿದೆ. ಅಗತ್ಯವಿದ್ದರೆ ಮೇಲೆ ಮತ್ತೊಂದು ಕೊಠಡಿ ಕಟ್ಟಿಕೊಳ್ಳಬಹುದು ಎಂದು ರೀಬಿಲ್ಡ್ ಕೊಡಗು ಯೋಜನಾ ನಿರ್ದೇಶಕ ರವಿ ಅಪ್ಪಾಜಿ ಹೇಳಿದರು.
ರೋಟರಿ ಸಂಸ್ಥೆ ಪ್ರವಾಹ ಗತಿಸಿ ವರ್ಷ ಕಳೆಯುವ ಮೊದಲೇ ಸಂತ್ರಸ್ತರ ಜಾಗದಲ್ಲೇ ತಲಾ 5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿದ್ದು, ಇತರೆ ನೆರೆ ಸಂತ್ರಸ್ತರಿಗೆ ಸರ್ಕಾರ ನಿವೇಶನಗಳನ್ನು ಕೊಡುವ ಮೊದಲೇ ಮನೆಗಳನ್ನು ಹಸ್ತಾಂತರಿಸುವುದು ಶ್ಲಾಘನೀಯ ವಿಚಾರ.