ಚೆನ್ನೈ: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇಂದು ಮಧ್ಯಾಹ್ನ ಪುದುಚೇರಿ ಕರಾವಳಿ ತೀರದತ್ತ ಅಪ್ಪಳಿಸಲಿದ್ದು, ಪರಿಣಾಮವಾಗಿ ತಮಿಳುನಾಡಿನಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಶುಕ್ರವಾರದಿಂದಲೇ ಮಳೆ ಆರಂಭವಾಗಿದ್ದು, ಕ್ರಮೇಣ ಇದು ಅನೇಕ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮಡಿಪಕ್ಕಮ್ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಫ್ಲೈಓವರ್ನ ಎರಡು ರಸ್ತೆ ಬದಿ ಜಲಾವೃತಗೊಂಡಿದೆ.
ಭಾರೀ ಮಳೆ ಹಿನ್ನೆಲೆ ಜನರು ಸುರಕ್ಷಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದ್ದು, ರಸ್ತೆಗಳು ನಿರ್ಜನವಾಗಿವೆ. ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮಳೆ ಅತಿ ಹೆಚ್ಚಿನ ಪರಿಣಾಮದ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.
ವಿಮಾನ ಸಂಚಾರ ವ್ಯತ್ಯಯ: ಮಳೆ- ಗಾಳಿ ಹಿನ್ನೆಲೆ ವಿಮಾನ ಸಂಚಾರದಲ್ಲೂ ಕೂಡ ವ್ಯತ್ಯಯ ಉಂಟಾಗಿದೆ. ಇನ್ನು ಚೆನ್ನೈ ಮೆಟ್ರೋ ರೈಲು ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಪ್ರವಾಹಕ್ಕೆ ಒಳಗಾಗುವ ನಿರ್ದಿಷ್ಟ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಪ್ರದೇಶಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ರಾಜ್ಯ ಸಾರಿಗೆ ನಿಗಮಗಳು ಸೀಮಿತ ಕಾರ್ಯಾಚರಣೆ ನಡೆಸಿದೆ.
ಸಮುದ್ರ ತೀರ ಪ್ರದೇಶ, ಮರಿನಾ ಮತ್ತು ಮಮ್ಮಲಪುರಮ್ ಬೀಚ್ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರಕಾರಿಸಲಾಗಿದ್ದು, ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಮತ್ತು ವ್ಯವಸ್ಥೆಯಲ್ಲಿಯೂ ಯಾವುದೇ ವ್ಯತ್ಯಯವಾಗಿಲ್ಲ. ಮಳೆಯಿಂದಾಗಿ ಈಗಾಗಲೇ ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಸಮುದ್ರದ ಪ್ರಕ್ಷುಬ್ಧತೆ ಮತ್ತು ಉಬ್ಬರವಿಳಿತದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಹವಾಮಾನ ಇಲಾಖೆ ತಿಳಿಸಿದೆ.
ಪರಿಸ್ಥಿತಿ ಎದುರಿಸಲು ಸಜ್ಜು: ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಕಡಲೂರು, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಮೈಲಾಡುತುರೈ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.
ಮಳೆ ಪರಿಣಾಮ ಎದುರಿಸಲು ಸರ್ಕಾರ ಸಜ್ಜಾಗಿದ್ದು, ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ಇರುವ ಪ್ರದೇಶಗಳಲ್ಲಿ 2,229 ಪರಿಹಾರ ಕೇಂದ್ರಗಳನ್ನು ತೆರೆದಿದೆ.
ಸದ್ಯ ತಿರುವರೂರ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ನಿರಾಶ್ರಿತ ಶಿಬಿರ ತೆರೆದಿದ್ದು, 164 ಕುಟುಂಬಗಳನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಮುಂದೆ ಅಗತ್ಯವಿದ್ದಲ್ಲಿ ಮತ್ತಷ್ಟು ಸ್ಥಳಾಂತರ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಮಳೆ ಹಿನ್ನೆಲೆ ಅನಗತ್ಯವಾಗಿ ಮನೆಯಿಂದ ಹೊರಬಾರದು, ಜನರು ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿದೆ. (ಪಿಟಿಐ/ ಐಎಎನ್ಎಸ್)
ಇದನ್ನೂ ಓದಿ: 2025ರಲ್ಲಿ ಎಷ್ಟು ಸೂರ್ಯಗ್ರಹಣಗಳು ಸಂಭವಿಸುತ್ತವೆ ಗೊತ್ತಾ?