ಮಂಗಳೂರು : ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರವಾಹದಿಂದ ಹಾನಿಯಾಗಿದ್ದರೂ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತ್ರ ಇನ್ನೂ ಕೂಡ ಪರಿಹಾರ ನೀಡುವ ಬಗ್ಗೆ ಚಕಾರವೆತ್ತುತ್ತಿಲ್ಲ. ಈವರೆಗೆ ಅಧ್ಯಯನಕ್ಕೆ ಕೇಂದ್ರ ತಂಡವನ್ನು ಕಳುಹಿಸಿಲ್ಲ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆಪಾದಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಉತ್ತರ ಕರ್ನಾಟಕ ನೆರೆ ಸಂದರ್ಭದಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಆಗಿನ ಸಿಎಂ ಯಡಿಯೂರಪ್ಪ ಜೊತೆಗೆ ವೈಮಾನಿಕ ಸಮೀಕ್ಷೆ ಮಾಡಿ ಕೇಂದ್ರದಿಂದ 2 ಸಾವಿರ ಕೋಟಿ ಪರಿಹಾರ ಘೋಷಿಸಿದ್ದರು. ಆದರೆ ಇಬ್ಬರು ಕೇಂದ್ರ ಸಚಿವರು ವೈಮಾನಿಕ ಸಮೀಕ್ಷೆ ಮಾಡಿ ಹೋಗಿದ್ದರೂ ಕೂಡಾ ಕೇಂದ್ರ ಸರಕಾರ ಈವರೆಗೆ ಪರಿಹಾರ ಘೋಷಣೆಯ ಬಗ್ಗೆ ಚಕಾರವೆತ್ತಿಲ್ಲ. ಬೇರೆ ವಿಚಾರದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ಪ್ರಧಾನಮಂತ್ರಿಗಳು ನೆರೆ ಸಂತ್ರಸ್ತರ ಜೊತೆಗೆ ನಾವಿದ್ದೇವೆ ಎನ್ನುವ ಮಾತನ್ನಾಡಿಲ್ಲ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಗಳಿಗೆ ನಾವು ಕೊಡಗು ಮಾದರಿಯಲ್ಲಿ ಪರಿಹಾರ ಘೋಷಣೆಗೆ ಆಗ್ರಹಿಸಿದ್ದೆವು. ಆದರೆ ಯಡಿಯೂರಪ್ಪ ಅವರು ನೀಡಿರುವ ಆಶ್ವಾಸನೆಯನ್ನು ಅಧಿಕಾರಿಗಳು ಈಡೇರಿಸುತ್ತಿಲ್ಲ, ನಿನ್ನೆ ಮುಖ್ಯಮಂತ್ರಿಗಳು ಪರಿಹಾರ ವಿತರಣೆಯಲ್ಲಿ ಕಾನೂನು ಸಬೂಬು ಹೇಳಬೇಡಿ ಎಂದಿದ್ದಾರೆ. ತಕ್ಷಣದ ಪರಿಹಾರವಾಗಿ 10 ಸಾವಿರ ಘೋಷಣೆ ಮಾಡಿದರೂ ಎನ್ಡಿಆರ್ಎಫ್ ನಿಯಮದಂತೆ ಸಂತ್ರಸ್ತರಿಗೆ 3800 ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸರಿಯಾದ ಪರಿಹಾರ ಸಿಗಬೇಕೆಂದು ಐವನ್ ಡಿಸೋಜ ಆಗ್ರಹಿಸಿದರು.