ಮಂಗಳೂರು: ನಗರದ ಪೊಲೀಸ್ ಕಂಟ್ರೋಲ್ ರೂಂನ ನಿಸ್ತಂತು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ಕೆ.ಜಯಪ್ರಕಾಶ್ ಅವರಿಗೆ 2019-20ರ ಸಾಲಿನ ಪ್ರೆಸಿಡೆನ್ಸಿಯಲ್ ಪೊಲೀಸ್ ಪದಕ ಘೋಷಣೆಯಾಗಿದೆ. ಈ ವರ್ಷದಲ್ಲಿ ಪ್ರೆಸಿಡೆನ್ಸಿಯಲ್ ಪೊಲೀಸ್ ಪದಕಕ್ಕೆ ಭಾಜನರಾಗಿರುವ ದ.ಕ. ಜಿಲ್ಲೆಯ ಏಕೈಕ ಪೊಲೀಸ್ ಅಧಿಕಾರಿ ಇವರಾಗಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂನಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಕೋಮು ಸಂಘರ್ಷ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ನಿಸ್ತಂತು ವಿಭಾಗದಲ್ಲಿದ್ದು ಮಾಡಿದ ನಿರ್ವಹಣೆಗೆ ಈ ಪದಕ ಪ್ರಕಟಿಸಲಾಗಿದೆ. ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆ ನಿವಾಸಿಯಾಗಿರುವ ಜಯಪ್ರಕಾಶ್ 2018ರಿಂದ ಮಂಗಳೂರು ನಗರ ಕಮಿಷನರ್ ಕಚೇರಿಯ ನಿಸ್ತಂತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
1992ರಲ್ಲಿ ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಇಲಾಖೆಗೆ ಸೇರ್ಪಡಗೊಂಡ ಜಯಪ್ರಕಾಶ್ ರವರು 1998ರಲ್ಲಿ ದ.ಕ. ಜಿಲ್ಲಾ ನಿಸ್ತಂತು ವಿಭಾಗದಲ್ಲಿ ಹಿರಿಯ ಪೊಲೀಸ್ ಪೇದೆಯಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿಂದ 2012ರಲ್ಲಿ ಎಎಸ್‌ಐ ಆಗಿ ಬಡ್ತಿಗೊಂಡು ಮಡಿಕೇರಿ ಜಿಲ್ಲಾ ನಿಸ್ತಂತು ವಿಭಾಗ, ಬಳಿಕ 2013ರಲ್ಲಿ ಮತ್ತೆ ದ.ಕ. ಎಸ್ಪಿ ಕಚೇರಿಯ ನಿಸ್ತಂತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿಂದ ನಗರ ಪೊಲೀಸ್ ಆಯುಕ್ತರ ಕಚೇರಿಗೆ ವರ್ಗಾವಣೆಗೊಂಡಿದ್ದರು.