ಮಂಗಳೂರು: ಕರ್ನಾಟಕ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇದೀಗ ಮಂಗಳೂರಿಗೆ ಆಗಮಿಸಿದ್ದು, ಇಂದು ನಗರದ ಸರ್ಕ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಆಗಮಿಸಿದ ಅವರು, ಸಂಜೆ 6.45 ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅಲ್ಲಿಂದ ವಿಶೇಷ ಭದ್ರತೆಯ ವಾಹನದ ಮೂಲಕ ರಸ್ತೆ ಮಾರ್ಗದಲ್ಲಿ ಸರ್ಕ್ಯೂಟ್ ಹೌಸ್ಗೆ ಆಗಮಿಸಿದರು. ರಾಷ್ಟ್ರಪತಿ ವಾಸ್ತವ್ಯ ಹಿನ್ನೆಲೆ ಸರ್ಕ್ಯೂಟ್ ಹೌಸ್ ಸುತ್ತಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ರಾಷ್ಟ್ರಪತಿ ಬರುವ ಅರ್ಧ ತಾಸು ಮೊದಲು ಯಾರಿಗೂ ಸರ್ಕ್ಯೂಟ್ ಹೌಸ್ ವ್ಯಾಪ್ತಿಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಲಾಯಿತು.
ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ವಾಸ್ತವ್ಯವಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಇಂದು ಇಲ್ಲಿಯೇ ಭೋಜನ ಸೇವಿಸಿ ರಾತ್ರಿ ಉಳಿದುಕೊಳ್ಳಲಿದ್ದಾರೆ. ನಾಳೆ ಬೆಳಗಿನ ಉಪಹಾರ ಸೇವಿಸಿ ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಲಿದ್ದಾರೆ.
ಶೃಂಗೇರಿಯಲ್ಲಿ ಶ್ರೀ ದಕ್ಷಿಣಾಮ್ನಾಯ ಶಾರದಾ ಪೀಠದ ಶ್ರೀಶಾರದಾ ಮಾತೆಯ ದರ್ಶನ ಪಡೆಯಲಿದ್ದಾರೆ. ಅಲ್ಲಿ ವಿವಿಧ ಕಾರ್ಯಗಳಲ್ಲಿ ಭಾಗವಹಿಸುವ ಅವರು, ಬಳಿಕ ಸಂಜೆ 4.20ಕ್ಕೆ ಶೃಂಗೇರಿಯ ಹೆಲಿಪ್ಯಾಡ್ನಲ್ಲಿ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಸಂಜೆ 4.55ಕ್ಕೆ ವಿಮಾನ ನಿಲ್ದಾಣ ತಲುಪುವ ರಾಷ್ಟ್ರಪತಿಯವರು ಸಂಜೆ 5.10ರ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ:ಶೃಂಗೇರಿಗೆ ರಾಷ್ಟ್ರಪತಿ ಭೇಟಿ ಹಿನ್ನೆಲೆ 2 ದಿನ ಪಟ್ಟಣ ಬಂದ್: ವ್ಯಾಪಾರಸ್ಥರ ಆಕ್ರೋಶ