ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದ್ದು, ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಎಲ್ಲಾ ಜನಪ್ರತಿನಿಧಿಗಳು ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಆದ್ದರಿಂದ ಸರ್ಕಾರದ ಆಶಯದಂತೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿದ್ದೇವೆ ಎಂದರು. ಕಾಸರಗೋಡು ಗಡಿ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ಬರಲು ಅನುವು ಮಾಡಿಕೊಡಲು ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿಯಾಗಿಯೂ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕೇವಲ ಒಂದು ಪ್ರದೇಶದಿಂದ ಒಂದು ವಿದ್ಯಾರ್ಥಿಗೆ ಕೂಡಾ ಅಗತ್ಯವಿದ್ದಲ್ಲಿ ಬಸ್ ವ್ಯವಸ್ಥೆ ಮಾಡಲು ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ದ.ಕ ಜಿಲ್ಲೆಯಲ್ಲಿ 95 ಪರೀಕ್ಷಾ ಕೇಂದ್ರಗಳಿವೆ. 855 ಸಿಬ್ಬಂದಿಯನ್ನು ಪರೀಕ್ಷಾ ಕೇಂದ್ರಗಳ ಮೇಲುಸ್ತುವಾರಿಯಾಗಿ ನೇಮಕ ಮಾಡಲಾಗಿದೆ. 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 1,585 ಕೊಠಡಿಗಳನ್ನು ಪರೀಕ್ಷೆಗಾಗಿ ಮೀಸಲಿರಿಸಲಾಗಿದೆ. ಪರೀಕ್ಷೆ ನಡೆಯುವ ಕೇಂದ್ರಗಳ 100 ಮೀ. ಒಳಗೆ 144 ಸೆಕ್ಷನ್ ಹಾಕಲಾಗಿದ್ದು, ಅನ್ಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ ಮಾತನಾಡಿ, ಎಸ್ಎಸ್ಎಲ್ಸಿ ಪರೀಕ್ಷೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯ 95 ಪರೀಕ್ಷಾ ಕೇಂದ್ರಗಳಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಕೇಂದ್ರಗಳಿಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಸ್ಯಾನಿಟೈಸರ್ ಮಾಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್, ನಗರದಲ್ಲಿ ಮನಪಾ, ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆಗಳಲ್ಲಿ ಆಯಾ ಮುಖ್ಯಾಧಿಕಾರಿಗಳು ನೇತೃತ್ವ ವಹಿಸಿಕೊಂಡಿದ್ದಾರೆ. ಕೇರಳ ಗಡಿ ಭಾಗದಿಂದ ಸುಳ್ಯ ಕಲ್ಚಾರ್ವರೆಗೆ ಈವರೆಗೆ 39 ಗಡಿಗಳನ್ನು ಗುರುತಿಸಿ ಶಿಕ್ಷಕರು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನೇಮಕಗೊಂಡ ಅಧಿಕಾರಿಗಳು ಪರೀಕ್ಷಾ ದಿನ ಬೆಳಗ್ಗೆ 7 ಗಂಟೆಗೆ ಗಡಿ ಭಾಗಗಳಿಗೆ ಬಸ್ಗಳನ್ನು ಕೊಂಡೊಯ್ದು ವಿದ್ಯಾರ್ಥಿಗಳನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸವ ವ್ಯವಸ್ಥೆ ಮಾಡಲಾಗಿದೆ ಎಂದರು.