ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಈ ಬಾರಿ ಕೋವಿಡ್ ನಿಯಮಾವಳಿಯಂತೆ ಜಾತ್ರೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮುಂಜಾಗ್ರತೆಗಾಗಿ ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯದ ಭಕ್ತರನ್ನು ಸುಬ್ರಹ್ಮಣ್ಯಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಡಿ.19 ರಂದು ಪಂಚಮಿಯ ರಾತ್ರಿ ಪಂಚಮಿ ರಥೋತ್ಸವ ಹಾಗೂ ಸಾಂಕೇತಿಕ ಸಿಡಿಮದ್ದು ಉತ್ಸವ ನೆರವೇರಲಿದೆ. ಡಿ.20 ರಂದು ಬೆಳಗ್ಗೆ ಮಹಾ ರಥೋತ್ಸವ ನಡೆಯಲಿದೆ. ಕ್ಷೇತ್ರದಲ್ಲಿ ರಥೋತ್ಸವ ನೆರವೇರಲು ರಥಕಟ್ಟುವ ಕಾರ್ಯ ಅಂತಿಮ ಹಂತದಲ್ಲಿದೆ.
ದೇವಳದ ವತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ಭದ್ರತೆ ಹಾಗೂ ತಪಾಸಣೆ ನಡೆಸಲಾಗುತ್ತಿದೆ. ಕ್ಷೇತ್ರಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಓದಿ: ಜಾತ್ರಾ ಸಮಯದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಆಗಮಿಸುವ ವಿಶೇಷ ಅತಿಥಿಗಳು!
ಕೋವಿಡ್ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಎಡೆಸ್ನಾನವನ್ನು ರದ್ದುಪಡಿಸಲಾಗಿತ್ತು. ಆದರೆ, ಕೆಲವೇ ಕೆಲವು ಮಂದಿ ಬೀದಿ ಮಡೆಸ್ನಾನ ಮಾಡುವ ದೃಶ್ಯ ಕಂಡು ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಕಾರ್ಯ ನಿರ್ವಾಹಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಎಲ್ಲಾ ಕಾರ್ಯಗಳೂ ನಡೆಯುತ್ತಿವೆ.