ಬಂಟ್ವಾಳ(ದ.ಕ.) : ಹೊರರಾಜ್ಯಗಳಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನವರು ಮರಳಿ ಊರಿಗೆ ಆಗಮಿಸುವ ಸಂದರ್ಭ ನಿಯಮ ಪ್ರಕಾರ ಅವರನ್ನು ಕ್ವಾರಂಟೈನ್ನಲ್ಲಿರಿಸಬೇಕಾಗಿದೆ. ಇದಕ್ಕಾಗಿ ತಾಲೂಕು ಆಡಳಿತ ಸಜ್ಜುಗೊಂಡಿದೆ.
ಸುಮಾರು 350ರಷ್ಟು ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಇದಕ್ಕೆ ತಾಲೂಕಿನಾದ್ಯಂತ 12ಕ್ಕೂ ಅಧಿಕ ಹಾಸ್ಟೆಲ್, ಶಾಲಾ ಕೊಠಡಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲು ಆಡಳಿತ ಸಜ್ಜಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ತಾಲೂಕು ತಹಶೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬಿಇಒ ಜ್ಞಾನೇಶ್ ಸಹಿತ ಸಮಾಜ ಕಲ್ಯಾಣ, ಬಿಸಿಎಂ ಇಲಾಖೆಗಳ ಅಧಿಕಾರಿಗಳು ಈಗಾಗಲೇ ಸಭೆಯೊಂದನ್ನು ನಡೆಸಿ ಪೂರಕ ಸಿದ್ಧತೆಗಳಿಗೆ ಬೇಕಾದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇವುಗಳ ಮೇಲುಸ್ತುವಾರಿಯನ್ನು ಆಯಾ ಹಾಸ್ಟೆಲ್ಗಳ ವಾರ್ಡನ್, ಆಯಾ ಪ್ರದೇಶಗಳಲ್ಲಿರುವ ಗ್ರಾಮಲೆಕ್ಕಾಧಿಕಾರಿ ಮತ್ತು ಪಿಡಿಒ ವಹಿಸಲಿದ್ದು, ಸಮಾಜ ಕಲ್ಯಾಣಾಧಿಕಾರಿ ಇದರ ನೋಡಲ್ ಅಧಿಕಾರಿಯಾಗಿದ್ದಾರೆ.
ಅಗತ್ಯವಿದ್ದರೆ ಖಾಸಗಿ ಕಾಲೇಜು ಹಾಸ್ಟೆಲ್ಗಳಲ್ಲೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಹಾಸ್ಟೆಲ್ಗಳ ಅಡುಗೆಯವರಿಗೆ ಕಡ್ಡಾಯ ಹಾಜರಾತಿ ವಿಧಿಸಲಾಗಿದೆ. ಎಲ್ಲರಿಗೂ ಮಾಸ್ಕ್ ಸಹಿತ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯವಾಗಿದೆ. ಗ್ರಾಮ ಪಂಚಾಯತ್ಗಳು ಊಟೋಪಚಾರದ ನಿರ್ವಹಣೆ ಕೈಗೊಳ್ಳಲಿವೆ. ತಾಲೂಕು ಪಂಚಾಯತ್ ಸಹಿತ ತಾಲೂಕಾಡಳಿತ ಇದರ ಕುರಿತು ನಿಗಾವಹಿಸಲಿದೆ.