ಮಂಗಳೂರು: ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಬರೆಯಬೇಕಿದ್ದ ಎಂಟೂವರೆ ತಿಂಗಳ ಗರ್ಭಿಣಿ ಅಭ್ಯರ್ಥಿಯೊಬ್ಬರು ಹೈಕೋರ್ಟ್ ನಿರ್ದೇಶನದಂತೆ ಮಂಗಳೂರಿನಲ್ಲಿ ಬರೆದರು. ನ್ಯಾಯವಾದಿ ನೇತ್ರಾವತಿ ಎಂಬವರು ಹೈಕೋರ್ಟ್‌ನ ವಿಶೇಷ ಅನುಮತಿ ಪಡೆದು ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆಯನ್ನು ಮಂಗಳೂರಿನ ನ್ಯಾಯಾಲಯ ಸಂಕೀರ್ಣದ ಕಟ್ಟಡದಲ್ಲಿ ಶನಿವಾರ ಮತ್ತು ಭಾನುವಾರ ಬರೆದಿದ್ದಾರೆ.
ಪ್ರಕರಣದ ವಿವರ: ಬೆಂಗಳೂರಿನ ಹೈಕೋರ್ಟ್ ಪೀಠದಲ್ಲಿ ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆ ನಡೆಯುತ್ತಿದೆ. ಗರ್ಭಿಣಿ ನೇತ್ರಾವತಿ ಬೆಂಗಳೂರಿಗೆ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ನವೆಂಬರ್ 18 ಮತ್ತು 19ರಂದು ನಡೆಯಲಿರುವ ಪರೀಕ್ಷೆ ಬರೆಯುವಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವಕಾಶ ಕಲ್ಪಿಸಿಕೊಟ್ಟಿದ್ದರು.
ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ನೇತ್ರಾವತಿ ಎಂಟೂವರೆ ತಿಂಗಳ ಗರ್ಭಿಣಿಯಾಗಿರುವುದರಿಂದ ಅವರ ಆರೋಗ್ಯ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆಕೆಗೆ ಪ್ರವಾಸ ಮಾಡಲಾಗದು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್, ಕೆ.ಸೋಮಶೇಖರ್, ಎಸ್.ಸುನಿಲ್ ದತ್ ಯಾದವ್, ಅಶೋಕ್ ಎಸ್.ಕಿಣಗಿ ಮತ್ತು ಎಂ.ನಾಗಪ್ರಸನ್ನ ಅವರನ್ನೊಳಗೊಂಡ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿ ನೇತ್ರಾವತಿ ಕೋರಿಕೆಗೆ ಒಪ್ಪಿಗೆ ಸೂಚಿಸಿತ್ತು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳೂ ಅನುಮತಿ ನೀಡಿದ್ದರು.
ನೇತ್ರಾವತಿ ಪರೀಕ್ಷೆ ಬರೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಪರೀಕ್ಷಾ ಕೇಂದ್ರಕ್ಕೆ ನ್ಯಾಯಾಂಗ ಅಧಿಕಾರಿಯನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮೇಲ್ವಿಚಾರಣೆ ನಡೆಸಲಿದ್ದು, ತುರ್ತು ಸಂದರ್ಭ ಉದ್ಭವಿಸಿದರೆ ವೈದ್ಯಕೀಯ ವ್ಯವಸ್ಥೆ ಮಾಡುವಂತೆ ಅವರಿಗೆ ನಿರ್ದೇಶಿಸಲಾಗಿತ್ತು. ಅದರಂತೆ ನ್ಯಾಯಾಲಯದ ಆವರಣದಲ್ಲಿ ಆಂಬ್ಯುಲೆನ್ಸ್ ವಾಹನವನ್ನು ಸಜ್ಜುಗೊಳಿಸಲಾಗಿತ್ತು.
ಹೈಕೋರ್ಟ್ 2023ರ ಮಾರ್ಚ್ 9ರಂದು 57 ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಜುಲೈ 23ರಂದು ಪ್ರಾಥಮಿಕ ಪರೀಕ್ಷೆ ನಡೆಸಲಾಗಿದ್ದು, 6 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,022 ಮಂದಿ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ನೇತ್ರಾವತಿ ಒಬ್ಬರು.
ಇದನ್ನೂ ಓದಿ: ಆಟೋದಲ್ಲಿ ತೆರಳುತ್ತಿದ್ದಾಗ ಪ್ರಸವವೇದನೆ; ಹೆರಿಗೆ ಮಾಡಿಸಿ ಸಮಯಪ್ರಜ್ಞೆ ಮೆರೆದ ಸಮುದಾಯ ಆರೋಗ್ಯಾಧಿಕಾರಿ