ಸುಳ್ಯ (ದಕ್ಷಿಣ ಕನ್ನಡ): ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆಯ ಪ್ರಥಮ ವರದಿ ಬಿಡುಗಡೆ ಮಾಡಿದೆ. ಸ್ಥಳೀಯ ಜನರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ ಎಂಬ ಅಂಶ ತನಿಖೆಯಲ್ಲಿ ಬಯಲಿಗೆ ಬಂದಿದೆ.
ಎಫ್‌ಐಆರ್ ದಾಖಲು: ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿದಂತೆ ಎನ್‌ಐಎ ತನ್ನದೇ ಆದ ರೀತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಝಾಕೀರ್, ಮಹಮ್ಮದ್ ಶಫೀಕ್, ಶೇಕ್ ಸದ್ದಾಂ ಮತ್ತು ಅಬ್ದುಲ್ ಹ್ಯಾರಿಸ್ ಮೇಲೆ ಐಪಿಸಿ 120ಬಿ, 302, 34 ಹಾಗೂ ಯುಎಪಿಎ ಕಲಂ 16 ಮತ್ತು18 ರಡಿ ಎಫ್‌ಐಆರ್ ದಾಖಲಾಗಿದೆ.

ಎನ್ಐಎ ಈಗಾಗಲೇ ಬೆಳ್ಳಾರೆ ಪೊಲೀಸ್ ಠಾಣೆಯಿಂದ ಪ್ರಕರಣದ ಕೇಸ್ ಫೈಲ್ ಪಡೆದು ತನ್ನದೇ ಆದ ರೀತಿಯಲ್ಲಿ ತನಿಖೆ ಕೈಗೊಂಡಿದೆ. ಬೆಳ್ಳಾರೆ ಠಾಣೆಯಲ್ಲಿ ದಾಖಲಾದ ಕೇಸ್ ವಿವರಗಳನ್ನೂ ಎನ್ಐಎ ಎಫ್ಐಆರ್ನಲ್ಲಿ ಉಲ್ಲೇಖಿಸಿದೆ. ಅದರ ಜೊತೆಗೆ ಹತ್ಯೆ ಹಿಂದಿನ ಉದ್ದೇಶ ಏನು, ತನಿಖಾ ಸಮಯದಲ್ಲಿ ಬೆಳಕಿಗೆ ಬಂದ ಕೆಲವು ವಿಚಾರಗಳು ಎನ್‌ಐಎ ದಾಖಲಿಸಿದ ಎಫ್‌ಐಆರ್ ನಲ್ಲಿ ಉಲ್ಲೇಖವಾಗಿವೆ ಎನ್ನಲಾಗ್ತಿದೆ.

ನ್ಯಾಯಾಂಗ ಬಂಧನ: ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದು, ಪ್ರಕರಣದ ಗೂಡಾಲೋಚನೆ ವಿಚಾರವಾಗಿ ತನಿಖೆ ಚುರುಕುಗೊಂಡಿದೆ. ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧಿತರಾಗಿರುವ ಮೂವರು ಪ್ರಮುಖ ಆರೋಪಿಗಳಿಗೆ ಸುಳ್ಯ ನ್ಯಾಯಾಲಯವು ಆಗಸ್ಟ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಸುಳ್ಯದ ಶಿಹಾಬುದ್ದೀನ್, ರಿಯಾಝ್ ಅಂಕತಡ್ಕ, ಬಶೀರ್ ಎಲಿಮಲೆ ಇವರ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಇವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ: ಆ.16ರವರೆಗೆ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಈ ಮೂವರು ಪ್ರಮುಖ ಆರೋಪಿಗಳಿಗೆ ಸುಳ್ಯ ನ್ಯಾಯಾಲಯವು ಆಗಸ್ಟ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯುವುದಕ್ಕೆ ಎನ್ಐಎ ಅಧಿಕಾರಿಗಳಿಂದ ಸಿದ್ಧತೆ ನಡೆದಿದ್ದು, ಕೋರ್ಟ್ ಗೆ ಅರ್ಜಿ ಸಲ್ಲಿಸಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.