ಸುಳ್ಯ(ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಬೆಳ್ಳಾರೆಯ ಅಕ್ಷಯ ಚಿಕನ್ ಸೆಂಟರ್ ಬಳಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಿ.ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗಾಗಿ ಆ ಪಕ್ಷದ ವತಿಯಿಂದ ನಿರ್ಮಿಸುತ್ತಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಏ.27ರಂದು ನಡೆಯಲಿದೆ.
ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನೆಟ್ಟಾರು ಎಂಬಲ್ಲಿ ಪ್ರವೀಣ್ ಅವರ ಕನಸಾಗಿದ್ದ ಮತ್ತು ಅವರ ಆಸೆಯಂತೆ ಪ್ರವೀಣ್ ಅವರ ನಿಧನದ ನಂತರ ಈ ಮನೆಯನ್ನು ನಿರ್ಮಿಸಲಾಗುತ್ತಿದೆ. ಈ ಮನೆಗೆ 'ಪ್ರವೀಣ್' ಎಂದು ನಾಮಕರಣ ಮಾಡಲಾಗುತ್ತದೆ. ಪಕ್ಷದ ವತಿಯಿಂದ ಖಾಸಗಿ ಗುತ್ತಿಗೆದಾರ ಕಂಪನಿಯೊಂದಕ್ಕೆ ಈ ಮನೆ ನಿರ್ಮಾಣದ ಹೊಣೆಯನ್ನು ನೀಡಲಾಗಿತ್ತು. ಮನೆಯ ಕೆಲಸ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಇದೇ ತಿಂಗಳ 27ರಂದು ಬೆಳಗ್ಗೆ 8.40ಕ್ಕೆ ಶ್ರೀಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ಕಾರ್ಯಕ್ರಮಗಳು ನಡೆಯಲಿದೆ. ಅದೇ ದಿನ ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನರ್ತನ ಸೇವೆ ಕೂಡಾ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ.
ಪ್ರವೀಣ್ ನೆಟ್ಟಾರು ಅವರ ಕುಟುಂಬದವರು ನೀಡಿದ ನಕ್ಷೆಯ ಪ್ರಕಾರವಾಗಿ ಈ ಹಿಂದೆ ಅವರ ಕುಟುಂಬ ವಾಸವಿದ್ದ ಜಾಗದಲ್ಲೇ ಈ ಮನೆ ನಿರ್ಮಿಸಲಾಗಿದೆ. ಸುಮಾರು 2,700 ಚದರ ಅಡಿ ವಿಸ್ತೀರ್ಣದ ಮನೆಗೆ, ಅಂದಾಜು 60 ಲಕ್ಷ ವೆಚ್ಚ ಖರ್ಚು ಆಗಿದೆ. ಈ ಸಂಪೂರ್ಣ ವೆಚ್ಚವನ್ನು ಪಕ್ಷದಿಂದಲೇ ಭರಿಸಲಾಗಿದೆ ಎನ್ನಲಾಗಿದೆ. ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಗೃಹಪ್ರವೇಶ ಸಮಯದಲ್ಲಿ ರಾಜಕಾರಣಿಗಳ ಆಗಮನ ವಿರಳವಾಗಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಮನೆ ನಿರ್ಮಿಸಿ ಕೊಡಲು ಬಿಜೆಪಿ ನಿರ್ಧಾರ
ಪತ್ನಿಗೆ ಉದ್ಯೋಗ: ಇನ್ನು ಪ್ರವೀಣ್ ನೆಟ್ಟಾರು ಅವರ ಪತ್ನಿ ಅವರಿಗೆ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ನೆಲೆಯಲ್ಲಿ ನೇಮಕಾತಿ ಮಾಡಿ ಕಳೆದ ಸೆ.29ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಗುತ್ತಿಗೆ ಆಧಾರದಲ್ಲಿ ಸಿ ಗ್ರೂಪ್ ಹುದ್ದೆಗೆ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಎಂ. ಅವರನ್ನು ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಸಚಿವಾಲಯದಲ್ಲಿ ಹಿರಿಯ ಸಹಾಯಕ ಹುದ್ದೆಗೆ ನೂತನ ಕುಮಾರಿ ಅವರು ನೇಮಕವಾಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗ ನೀಡಿ ಸರ್ಕಾರದ ಆದೇಶ
ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪ್ರವೀಣ್: ಕಲೆದ ಜುಲೈ ತಿಂಗಳಿನಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ಬಿಜೆಪಿಯ ಯುವ ಮುಖಂಡ ಪ್ರವೀಣ್(32) ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪರಿಣಾಮ ಗಂಭೀರ ಗಾಯಗೊಂಡಿದ್ದ ಪ್ರವೀಣ್ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದರು. ಬಿಜೆಪಿ ಯುವ ನಾಯಕನಾಗಿದ್ದ ಪ್ರವೀಣ್ ನೆಟ್ಟಾರು ಚಿಕನ್ ಅಂಗಡಿಯ ಮಾಲೀಕರಾಗಿದ್ದರು.
ಇದನ್ನೂ ಓದಿ: ಬಿಜೆಪಿ ಯುವ ಮುಖಂಡನಿಗೆ ಮಾರಣಾಂತಿಕ ಹಲ್ಲೆ.. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು