ಮಂಗಳೂರು: ಕೊರೊನಾ ರೋಗವನ್ನು ಆರಂಭದಲ್ಲಿಯೇ ಗುರುತಿಸಿದರೆ ರೋಗಿಯು ಶೀಘ್ರ ಗುಣಮುಖನಾಗಲು ಮತ್ತು ಇತರರಿಗೆ ಹರಡದಂತೆ ತಡೆಯಲು ಸಾಧ್ಯವಿದೆ. ಆದರೆ ಮಂಗಳೂರಿನಲ್ಲಿ ಗಂಟಲು ದ್ರವ ತೆಗೆದ 10 ದಿನದ ಬಳಿಕ ಪಾಸಿಟಿವ್ ರಿಪೋರ್ಟ್ ರೋಗಿಯ ಕೈ ಸೇರಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೊರೊನಾ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ ಮಂಗಳೂರಿನ ಜೆಪ್ಪಿನಮೊಗರು ವ್ಯಕ್ತಿಯೊಬ್ಬರು ಆ. 19ರಂದು ಗಂಟಲು ದ್ರವವನ್ನು ಪರೀಕ್ಷೆಗೆ ನೀಡಿದ್ದರು. ಸರ್ಕಾರದ ನಿಯಮದಂತೆ ಆ. 28ರತನಕ ಅವರು ಮನೆಯಲ್ಲಿ ಕ್ವಾರಂಟೈನ್ನಲ್ಲಿದ್ದರು. ಆದರೆ ಅವರಿಗೆ ಆ. 28ರ ತನಕ ರಿಪೋರ್ಟ್ ಬಂದಿರಲಿಲ್ಲವಂತೆ. ಅವರಿಗೆ ಕೊರೊನಾ ಗುಣ ಲಕ್ಷಣಗಳು ಇಲ್ಲದೆ ಇರುವುದರಿಂದ ತನ್ನ ರಿಪೋರ್ಟ್ ನೆಗೆಟಿವ್ ಬಂದಿರಬಹುದು ಎಂದು ತಿಳಿದು ಕೊಂಡಿದ್ದರು.
ಆ. 29ರಂದು ಗಂಟಲು ದ್ರವದ ರಿಪೋರ್ಟ್ ಪಾಸಿಟಿವ್ ಎಂದು ಬಂದಿದ್ದು, ಆ. 30ರಂದು ಅವರಿಗೆ ಆರೋಗ್ಯ ಇಲಾಖೆ ತಿಳಿಸಿದೆ. ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಕ್ವಾರಂಟೈನ್ ಆಗಿದ್ದ ಇವರು ಇದೀಗ ರಿಪೋರ್ಟ್ ಪಾಸಿಟಿವ್ ಬಂದಿರುವುದರಿಂದ ಮತ್ತೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಾಮಾನ್ಯವಾಗಿ ಕೊರೊನಾ ರೋಗಿಗಳು ಹತ್ತು ದಿನದಲ್ಲಿ ಗುಣಮುಖರಾಗಿ ಮನೆಗೆ ಮರಳುತ್ತಾರೆ. ಆದರೆ ಇವರಿಗೆ ಕೊರೊನಾ ಪಾಸಿಟಿವ್ ಆದ 10 ದಿನದ ಬಳಿಕ ರಿಪೋರ್ಟ್ ಕೈ ಸೇರಿದೆ ಎನ್ನಲಾಗಿದೆ.