ಕಡಬ: ದಿನಾಲು ಖಾಕಿತೊಟ್ಟು, ಲಾಠಿ ಹಿಡಿದು ಕಾನೂನು ಪಾಲನೆಯಲ್ಲಿ ತೊಡಗುತ್ತಿದ್ದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡ ಇಂದು ಮುಂಜಾನೆ ಗುದ್ದಲಿ, ಹಾರೆ, ಬುಟ್ಟಿಗಳನ್ನು ಹಿಡಿದು ಪೊಲೀಸ್ ಠಾಣಾ ಪರಿಸರದ ಸ್ವಚ್ಚತಾ ಕಾರ್ಯ ಕೈಗೊಂಡರು.
ಈಗಾಗಲೇ ಕಡಬ ಪ್ರದೇಶದಲ್ಲಿ ಕಾನೂನು ಪಾಲಿಸದೇ ಇರುವವರಿಗೆ ಸಿಂಹಸ್ವಪ್ನವಾಗಿರುವ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ರ ನೇತೃತ್ವದ ಪೊಲೀಸರ ತಂಡವು ಸಮಾಜ ಸೇವೆಯಲ್ಲೂ ಒಂದು ಹೆಜ್ಜೆ ಮುಂದಿದೆ.
ಕಡಬ ಪೊಲೀಸರು ಇಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ಪೇಟೆಯಲ್ಲೂ ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆ ಹಾಕಿದ್ದಾರೆ. ಠಾಣೆಗೆ ನೂತನ ನಾಮಫಲಕ, ಗೇಟ್ ಅಳವಡಿಸಲಾಗಿದೆ. ಠಾಣಾ ಆಸ್ತಿಯ ಜಾಗಕ್ಕೆ ತಂತಿಬೇಲಿ ಅಳವಡಿಸಿ ಸಂಪೂರ್ಣವಾಗಿ ಸುರಕ್ಷಿತ ವಲಯವನ್ನಾಗಿ ಮಾಡಲಾಗುತ್ತಿದೆ.
ಇದರ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಬೆಳ್ಳಂ ಬೆಳಗ್ಗೆ ಸ್ವತಃ ಠಾಣಾಧಿಕಾರಿಯೇ ಹಾರೆ, ಬುಟ್ಟಿ ಹಿಡಿದು ಸ್ವಚ್ಛತೆಗೆ ನಿಂತು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.