ಮಂಗಳೂರು: ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳ ಪ್ರಕರಣಗಳ ಹಿನ್ನೆಲೆ ಇದನ್ನು ತಡೆಯುವ ನಿಟ್ಟಿನಲ್ಲಿ ಇಂದು ಮಂಗಳೂರು ಪೊಲೀಸರು 'ಮಹಿಳಾ ಸುರಕ್ಷತೆಗಾಗಿ ಒಂದು ದಿನ' ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದರು.
ಮಹಿಳಾ ಸುರಕ್ಷತೆಗಾಗಿ ಒಂದು ದಿನ, ‘112ಕ್ಕೆ ಕರೆ ನಿಮ್ಮಿಂದ, ನೀವಿರುವಲ್ಲಿಗೆ ಭೇಟಿ ನಮ್ಮಿಂದ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಂತೆ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ 112ಕ್ಕೆ ಕರೆ ಮಾಡಿದರೆ ಪೊಲೀಸ್ ಅಧಿಕಾರಿಗಳೇ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು ಇದರ ಉದ್ದೇಶ. ಸಾಧಾರಣವಾಗಿ 112ಕ್ಕೆ ಕರೆ ಮಾಡಿದರೆ ಘಟನಾ ಸ್ಥಳಕ್ಕೆ 15 ನಿಮಿಷದಲ್ಲಿ ತಲುಪುವ ERSS ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಇರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಒಲಿಂಪಿಯನ್ ಆಟಗಾರ್ತಿ, ಅರ್ಜುನ ಪ್ರಶಸ್ತಿ ವಿಜೇತೆ ಪೂವಮ್ಮ ಚಾಲನೆ ನೀಡಿದರು. ಮಹಿಳೆಯರು ತಮಗಾಗುವ ಕಿರುಕುಳ ತಪ್ಪಿಸಲು ಪೊಲೀಸರು ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್, 112ಕ್ಕೆ ಕರೆ ಮಾಡಿದರೆ ತಕ್ಷಣ ಪ್ರತಿಕ್ರಿಯೆ ಸಿಗಲಿದೆ. ಯಾವುದೇ ಸಮಸ್ಯೆಗಳಾದಾಗ ಇದನ್ನು ಬಳಸುವಂತೆ ಕರೆ ನೀಡಿದರು. ಸಂದರ್ಭದಲ್ಲಿ 112ಕ್ಕೆ ಕರೆ ಮಾಡುವ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಆಸ್ಪತ್ರೆಯಲ್ಲಿ ಸಮಸ್ಯೆಯಾಗಿದೆ ಎಂಬ ರೀತಿಯಲ್ಲಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಾಡಿದ ಕರೆಗೆ 5 ನಿಮಿಷದೊಳಗೆ 112 ವಾಹನದಲ್ಲಿ ಬಂದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಮೂಲಕ ERSS 112 ವಾಹನದಲ್ಲಿ ಘಟನಾ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಓದಿ: ವಿದ್ಯಾರ್ಥಿನಿಯರ ಓಡಾಟಕ್ಕೆ ಹಾಕಲಾಗಿದ್ದ ನಿರ್ಬಂಧದ ಸುತ್ತೋಲೆ ವಾಪಸ್ ಪಡೆದ ಮೈಸೂರು ವಿವಿ