ಮಂಗಳೂರು: ನಗರದಲ್ಲಿ ನಡೆದ ಹಿಂಸಾಚಾರ ಮತ್ತು ಗೋಲಿಬಾರ್ ಕೃತ್ಯಕ್ಕೆ ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಆರೋಪಿಸಿದರು.
ನಗರದ ಹೋಟೆಲೊಂದರಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆ ನಡೆಸಬೇಕೆಂದು ಸಂಘಟನೆಯೊಂದು ಅನುಮತಿ ಕೇಳಿದಾಗ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ನಿರಾಕರಿಸಿದ್ದಾರೆ. ನಾನು ಅವರಿಗೆ ಪ್ರತಿಭಟನೆ ಮಾಡಲು ಬಿಡ್ಲಿಲ್ಲ, ಇವರಿಗೆ ಬಿಡ್ಲಿಲ್ಲ. ನಿಮಗೂ ಬಿಡೋದಿಲ್ಲ. ನಾನು ಯಾರೆಂದು ಗೊತ್ತಾ ನಿಮಗೆ ಎಂದು ಸಾಗ ಹಾಕಿದ್ದಾರೆ ಎಂದು ಆರೋಪಿಸಿದರು.
ಗುರುವಾರ ದಿನ ಯಾವುದೇ ಪ್ರಚೋದನೆ ಮಾಡದೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಜನರು ಗುಂಪು ಗುಂಪಾಗಿ ನಿಂತಿದ್ದರು. ಆದರೆ ಯಾವುದೇ ಮಾಹಿತಿ ಇಲ್ಲದೆ ಏಕಾಏಕಿ ಲಾಠಿ ಪ್ರಹಾರ ಮಾಡಲಾಗಿದೆ. ಅದೇ ದಿನ ಬೆಂಗಳೂರಿನಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಆದರೆ ಅಲ್ಲಿ ಲಾಠಿಚಾರ್ಜ್ ಆಗಿಲ್ಲ. ಆದರೆ ಇಲ್ಲಿ ಯಾವುದೇ ಪ್ರಚೋದನೆ ಇಲ್ಲದೆ ನಡೆಸಿದ ಲಾಠಿಚಾರ್ಜ್ ಬಳಿಕ ಹಿಂಸಾರೂಪ ತಳೆದಿದೆ. ಇದು ಪೊಲೀಸರ ಪೂರ್ವನಿಯೋಜಿತ ಕೃತ್ಯ. ಜನರು ಪೊಲೀಸರು ನಡೆಸಿದ ಲಾಠಿಚಾರ್ಜ್ನಿಂದ ಹೆದರಿ ಬಂದರ್, ಕಂದಕ್ ಪ್ರದೇಶಗಳತ್ತ ಓಡಿದಾಗ ಅಲ್ಲಿಗೂ ಓಡಿಸಿಕೊಂಡು ಹೋಗಿ ಲಾಠಿಚಾರ್ಜ್ ಮಾಡಲಾಗಿದೆ ಎಂದು ಇಲ್ಯಾಸ್ ತುಂಬೆ ದೂರಿದರು.
ಅಲ್ಲದೆ ಗೋಲಿಬಾರ್ ಮಾಡಿದ ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಯಾರೂ ಸಾಯಲಿಲ್ಲವಾ?' ಎಂದು ಹೇಳುವ ವಿಡಿಯೋ ವೈರಲ್ ಆಗಿದೆ. ಇವರು ನಮ್ಮನ್ನು ಕಾಯುವ ಪೊಲೀಸರೇ? ಇವರ ಮನಸ್ಥಿತಿ ಎಂತದ್ದು? ಇಂತಹ ಕ್ರೌರ್ಯತನ ತುಂಬಿದ ಪೊಲೀಸರು ನಮಗೆ ಹೇಗೆ ರಕ್ಷಣೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪೊಲೀಸರಿಗೆ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಅಥಾವುಲ್ಲಾ, ಮಾಜಿ ಮೇಯರ್ ಅಶ್ರಫ್ ಅವರನ್ನು ಕರೆದಿದ್ದರು. ಆದರೆ ಅವರು ಉದ್ರಿಕ್ತರನ್ನು ಶಾಂತಿಗೆ ತರಲು ಯತ್ನಿಸುತ್ತಿದ್ದಾಗ ಅಶ್ರಫ್ ಅವರಿಗೇ ತಲೆಗೆ ಗಾಯವಾಗಿದೆ. ಆಸ್ಪತ್ರೆಗೆ ನುಗ್ಗಿಯೂ ಪೊಲೀಸರು ಟೀಯರ್ ಗ್ಯಾಸ್ ಸಿಡಿಸಿದ್ದಾರೆ, ಲಾಠಿಚಾರ್ಜ್ ನಡೆಸಿದ್ದಾರೆ. ಇಂತಹ ಘಟನೆ ಮಂಗಳೂರಿನ ಇತಿಹಾಸದಲ್ಲೇ ಪ್ರಥಮವಾಗಿ ನಡೆದಿದೆ. ನೂರೈವತ್ತು ಮಂದಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದ ಪೊಲೀಸರು ನಮಗೆ ಯಾಕೆ ಎಂದು ಇಲ್ಯಾಸ್ ತುಂಬೆ ಪ್ರಶ್ನಿಸಿದರು.