ಉಪ್ಪಿನಂಗಡಿ: ನಗರದ ರೆಸಾರ್ಟ್ವೊಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆಯಾದರೂ ಅದನ್ನು ಪೊಲೀಸ್ ಇಲಾಖೆ ಖಚಿತಪಡಿಸಿಲ್ಲ. ಹಾಗಾಗಿಯೂ ಕುಶಾಲನಗರದ ಲೋಹಿತ್ ಮತ್ತು ವಿಟ್ಲದ ಶರೀಪ್ ಪೊಲೀಸ್ ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಯುವತಿಯರು ಸೇರಿ ಒಟ್ಟು 7 ಜನರ ತಂಡ ಈ ಕೃತ್ಯ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ.
ದಂಧೆಕೋರರು ಮಂಗಳೂರು ಮೂಲದ ಯುವತಿಯರನ್ನು ಬಳಸಿ ಈ ದಂಧೆ ನಡೆಸುತ್ತಿದ್ದು, ಆರೋಪಿಗಳಿಗೆ ಸೇರಿದ ಮನೆಯೊಂದು ಪುತ್ತೂರಿನ ಸಾಲ್ಮರದಲ್ಲಿ ಇದೆ. ಆರೊಪಿಗಳು ತಮ್ಮ ಸಂಪರ್ಕಕ್ಕೆ ಬರುವ ಯುವಕರನ್ನು ಸಾಲ್ಮರದ ತಮ್ಮ ಮನೆಗೆ ಕರೆಯಿಸಿಕೊಂಡು ಅಲ್ಲಿ ತಮ್ಮಲ್ಲಿರುವ ಯುವತಿಯರನ್ನು ಜೋಡಿಯಾಗಿಸಿ ಬಳಿಕ ಅವರನ್ನು ಉಪ್ಪಿನಂಗಡಿಯ ರೆಸಾರ್ಟ್ಗೆ ಕಳುಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಬಳಿಕ ಜೋಡಿಗಳು ತಂಗಿರುವ ಕೊಠಡಿಗೆ ಈ ದಂಧೆಕೋರರು ದಾಳಿ ನಡೆಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಡಿಸುತ್ತಿದ್ದರು ಎನ್ನಲಾಗುತ್ತಿದೆ. ಇಂತಹುದೇ ಒಂದು ಕೃತ್ಯ ಜ.8 ರಂದು ನಡೆದು ಅದು ಕೇರಳ ಪೊಲೀಸರ ಮೂಲಕ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಅವರು ದಾಳಿ ನಡೆಸಿದಾಗ ಈ ದಂಧೆ ಬಹಿರಂಗವಾಗಿದೆ. ಆರೋಪಿಗಳ ಪೈಕಿ ಲೋಹಿತ್ ಹಾಗೂ ಷರೀಫ್ ಪೊಲೀಸ್ ವಶದಲ್ಲಿದ್ದರೆ, ವಿಟ್ಲದ ಜಮಾಲ್ ,ಜೀವನ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಜಮಾಲು ಹಾಗೂ ಲೋಹಿತ್ ಹನಿಟ್ರ್ಯಾಪ್ ಕುಖ್ಯಾತರಾಗಿದ್ದೂ, ಇವರ ವಿರುದ್ಧ ಹಲವು ಪ್ರಕರಣಗಳಿವೆ.
ನಿನ್ನೆ ಏನಾಯಿತು?
ಉಪ್ಪಿನಂಗಡಿಯ ರೆಸಾರ್ಟ್ನಲ್ಲಿ 2 ಜೋಡಿಗಳು ಇದ್ದ ಸಂದರ್ಭ ದಾಳಿ ಮಾಡಿದ ಐವರ ತಂಡ, ತಾವು ಕೇರಳದ ಪೊಲೀಸರು ಎಂದು ಹೇಳಿಕೊಂಡು ಅವರನ್ನು ಬೆದರಿಸಿ ಸುಲಿಗೆಗೆ ಯತ್ನಿಸಿದ್ದ ಬಗ್ಗೆ ಕೇರಳ ಪೊಲೀಸರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆ ಎರಡು ಜೋಡಿಗಳನ್ನು ಸಾಲ್ಮರದ ತಮ್ಮ ಮನೆಯಲ್ಲಿ ಜೋಡಿಯಾಗಿಸಿ ಆರೋಪಿಗಳು ಉಪ್ಪಿನಂಗಡಿಗೆ ಕಳುಹಿಸಿದ್ದರು. ಬಳಿಕ ಆರೋಪಿಗಳು ಈ ಜೋಡಿಗಳು ತಂಗಿದ್ದ ಕೊಠಡಿಗೆ ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿದ್ದರು. ಆದರೆ, ಈ ಜೋಡಿಗಳ ಪೈಕಿ ಓರ್ವ ಕೇರಳದ ತನ್ನ ಸಂಬಂಧಿ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದ. ಅವರ ಸೂಚನೆಯಂತೆ ಯುವಕ ತಾವು ತಂಗಿರುವ ರೆಸಾರ್ಟ್ ಲೋಕೇಶನ್ ಬಗ್ಗೆ ಅವರಿಗೆ ಮಾಹಿತಿ ರವಾನಿಸಿದ್ದು, ಈ ಮಾಹಿತಿಯನ್ನು ಕೇರಳದ ಪೊಲೀಸ್ ಅಧಿಕಾರಿ ಉಪ್ಪಿನಂಗಡಿ ಪೊಲೀಸರಿಗೆ ತಿಳಿಸಿದ್ದರು. ಸಿಐ ನಾಗೇಶ್ ಕದ್ರಿ ಹಾಗೂ ಎಸ್ಐ ಈರಯ್ಯ ನೇತ್ರತ್ವದ ತಂಡ ರೆಸಾರ್ಟ್ ಗೆ ದಾಳಿ ನಡೆಸಿತ್ತು.