ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ ಮಹಜರಿಗೆ ಕರೆದೊಯ್ಯುತ್ತಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿದ ಘಟನೆ ನಗರದ ಹೊರವಲಯದ ಅಸೈಗೋಳಿಯ ಕೋಣಾಜೆ ಪೊಲೀಸ್ ಠಾಣೆ ಹಿಂಭಾಗದಲ್ಲಿ ನಡೆದಿದೆ.
ಮುಕ್ತಾರ್ ಎಂಬಾತನೆ ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ಘಟನೆಯಲ್ಲಿ ಉಳ್ಳಾಲ ಠಾಣೆ ಪೊಲೀಸ್ ಸಿಬ್ಬಂದಿಯಾದ ವಾಸುದೇವ ಹಾಗೂ ಅಕ್ಬರ್ ಎಂಬುವರಿಗೆ ಗಾಯಗಳಾಗಿವೆ. ಆರೋಪಿ ಮೇಲೆ ಸುಮಾರು 15 ಪ್ರಕರಣಗಳು ದಾಖಲಾಗಿವೆ. 2017ರಿಂದ ಭಾಗಿಯಾಗಿದ್ದ 6 ಪ್ರಕರಣದಲ್ಲಿ ಈತನ ಬಂಧನವಾಗಿರಲಿಲ್ಲ. ಇಂದು ಪೊಲೀಸರು ಬಂಧಿಸಿ, ದುಷ್ಕೃತ್ಯ ಎಸಗಲು ಬಳಸಿದ ವಾಹನ ಮಹಜರಿಗೆ ಕರೆದುಕೊಂಡು ಹೋಗುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಆಗ ಠಾಣಾಧಿಕಾರಿ ಸಂದೀಪ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಮುಕ್ತಾರ್ ಮೇಲೆ ದಾಳಿ ಮಾಡಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಗಾಯಾಳು ಆರೋಪಿಯನ್ನು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಎರಡೇ ವರ್ಷದಲ್ಲಿ ಅಣ್ಣ-ತಮ್ಮನ ಕೊಂದ ಪಾತಕಿಯ ಹೆಡೆಮುರಿ ಕಟ್ಟಿದ ಪೊಲೀಸರು: ಪಿಎಸ್ಐ ಮೇಲೆ ದಾಳಿ ಮಾಡಿ ಗುಂಡೇಟು ತಿಂದ!