ಮಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು(ಪೋಕ್ಸೋ) ಅಪರಾಧಿ ಪೊಲೀಸ್ ಕಾನ್ಸ್ಟೇಬಲ್ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ಪ್ರವೀಣ್ ಸಾಲ್ಯಾನ್ (35) ಶಿಕ್ಷೆಗೊಳಗಾದ ಅಪರಾಧಿ. ಈತ ಬಜಪೆ ಸಿದ್ಧಾರ್ಥನಗರ ನಿವಾಸಿಯಾಗಿದ್ದಾನೆ.
2015ರ ಫೆ. 16ರಂದು ಪ್ರವೀಣ್ ಸಾಲ್ಯಾನ್ ಬಾಲಕಿಯನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು, ತಾನು ಪ್ರೀತಿಸುವುದಾಗಿ ನಾಟಕವಾಡಿ ಬಳಿಕ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ನಿರಂತರ ಸಂಪರ್ಕದಲ್ಲಿದ್ದ. ಬಳಿಕ ಆರೋಪಿಯು ತನ್ನ ಖಾಸಗಿ ಅಂಗದ ಫೋಟೋಗಳನ್ನು ಬಾಲಕಿಗೆ ಕಳುಹಿಸಿದ್ದಲ್ಲದೆ, ಆಕೆಯ ಜೊತೆಗೆ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ. ಬಳಿಕ ಆಕೆಯ ಮುಗ್ಧತೆಯನ್ನೇ ದುರುಪಯೋಗಪಡಿಸಿಕೊಂಡ ಆರೋಪಿ ಅಪ್ರಾಪ್ತೆ ಬಳಿ 1 ಲಕ್ಷ ರೂ. ಹಣ ಅಥವಾ ಚಿನ್ನ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಇದರಿಂದ ನೊಂದ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ, ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಸಮಗ್ರ ವಿಚಾರಣೆ ನಡೆಸಿ ಅಪರಾಧಿಗೆ ಐಪಿಸಿ 305ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸೆಕ್ಷನ್ 12ರಡಿ ಮೂರು ವರ್ಷ ಕಠಿಣ ಸಜೆ ಹಾಗೂ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣ ಬಯಲಿಗೆ ಬರುತ್ತಿದ್ದಂತೆ, ಆರೋಪಿಯನ್ನು ಪೊಲೀಸ್ ಇಲಾಖೆಯಿಂದ ಅಮಾನತು ಮಾಡಲಾಗಿತ್ತು. ಬಾಲಕಿ ಆತ್ಮಹತ್ಯೆಗೆ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಪ್ರವೀಣ್ ಸಾಲ್ಯಾನ್ ಕಾರಣ ಎಂದು ಬರೆದು, ಆತನ ಮೊಬೈಲ್ ನಂಬರ್ ನಮೂದಿಸಿದ್ದಳು. ಇದನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದು ಆರೋಪಿಗೆ ಶಿಕ್ಷೆಯಾಗಲು ಬಲವಾದ ಸಾಕ್ಷಿಯಾಗಿದೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕಂಬಳಿ ಮಾರುವ ನೆಪದಲ್ಲಿ ಬಂದು ಮಹಿಳೆ ಅತ್ಯಾಚಾರಕ್ಕೆ ಯತ್ನ: ಪರಾರಿಯಾಗುವಾಗ ಆರೋಪಿಗಳ ಕಾರು ಪಲ್ಟಿ