ಬಂಟ್ವಾಳ(ದಕ್ಷಿಣ ಕನ್ನಡ): ಬಂಟ್ವಾಳ ಭಂಡಾರಿಬೆಟ್ಟು ಬಳಿಯ ವಸತಿ ಸಂಕೀರ್ಣದಲ್ಲಿ ನಡೆದ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ, ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಳ್ತಂಗಡಿ ನಿವಾಸಿ ಪ್ರತೀಕ್ ಹಾಗೂ ಜಯೇಶ್ ಯಾನೆ ಸಚ್ಚು ಬಂಧಿತರು. ಹತ್ಯೆಯ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎಂಬ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದ್ದು, ಪ್ರಕರಣದ ಆರೋಪಿಗಳ ಸಂಖ್ಯೆ 11ಕ್ಕೇರಿದೆ.
ಅಮ್ಟಾಡಿ ಗ್ರಾಮದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ಗ್ರಾಮದ ಗಿರೀಶ್ (28), ಪ್ರದೀಪ್ ಕುಮಾರ್ ಅಲಿಯಾಸ್ ಪಪ್ಪು, ಶರೀಫ್ ಅಲಿಯಾಸ್ ಸಯ್ಯದ್ ಶರೀಫ್, ವೆಂಕಪ್ಪ ಪೂಜಾರಿ ಅಲಿಯಾಸ್ ವೆಂಕಟೇಶ ಮತ್ತು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಆಕಾಶ ಭವನ ಶರಣ್ ಆರೋಪದ ಮೇರೆಗೆ ರಾಜೇಶ್ ಮತ್ತು ದಿವ್ಯರಾಜ್ ಮತ್ತು ಅನಿಲ್ ಪಂಪ್ವೆಲ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ.
ಆರೋಪಿಗಳ ಪತ್ತೆಗೆ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಂ.ಲಕ್ಷ್ಮೀಪ್ರಸಾದ್, ಬಂಟ್ವಾಳ ಉಪ ವಿಭಾಗ ಉಪಾಧೀಕ್ಷಕ ವೆಲಂಟೈನ್ ಡಿಸೋಜಾ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ನಡೆಸುತ್ತಿದ್ದು, ಉಪ ವಿಭಾಗದ ವಿವಿಧ ಎಸ್ಐಗಳಾದ ಅವಿನಾಶ್ ಹೆಚ್. ಗೌಡ, ಪ್ರಸನ್ನ, ಸಂಜೀವ ಕೆ., ನಂದಕುಮಾರ್, ಕಲೈಮಾರ್, ವಿನೋದ್ ರೆಡ್ಡಿ, ರಾಜೇಶ್ ಕೆ.ವಿ., ಕುಮಾರ್ ಕಾಂಬ್ಳೆ ಪಿಐ, ರವಿ ಬಿ.ಎಸ್., ಪಿ.ಐ. ಡಿಸಿಐಬಿ ಚೆಲುವರಾಜ್ ಡಿಸಿಐಬಿ ಸಿಬ್ಬಂದಿ, ತಾಂತ್ರಿಕ ವಿಭಾಗದ ಸಿಬ್ಬಂದಿ, ವಿವಿಧ ಠಾಣೆಗಳ ನುರಿತ ಸಿಬ್ಬಂದಿಯನ್ನೊಳಗೊಂಡ ಒಟ್ಟು 5 ವಿಶೇಷ ಪತ್ತೆ ತಂಡ ರಚಿಸಲಾಗಿತ್ತು.