ಪುತ್ತೂರು: ಲಾಕ್‌ಡೌನ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಜನ್ಧನ್ ಬ್ಯಾಂಕ್ ಖಾತೆಗಳಿಗೆ ಹಣ ಬಿಡುಗಡೆ ಮಾಡಿದೆ. ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡಿಕೊಳ್ಳದಿದ್ದರೆ ಸರ್ಕಾರ ವಾಪಸ್ ಪಡೆಯುವುದಿಲ್ಲ. ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಬ್ಯಾಂಕ್ ಅಧಿಕಾರಿಗಳು ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಖಾತೆಗಳಿಗೆ ಜಮೆಯಾದ ಹಣವನ್ನು ಡ್ರಾ ಮಾಡಿಕೊಳ್ಳದಿದ್ದರೆ ಅದನ್ನು ಸರ್ಕಾರ ಹಿಂಪಡೆದುಕೊಳ್ಳಲಿದೆ ಎನ್ನುವ ಸುಳ್ಳು ಸಂದೇಶವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದಾಗಿ ಬ್ಯಾಂಕ್ ಎದುರು ಜನಸಂದಣಿ ಉಂಟಾಗಿತ್ತು. ಹೀಗಾಗಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ನಿಂದ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು.
ಜನ್ಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಮೂರು ತಿಂಗಳ ಕಾಲ ಪ್ರತಿ ತಿಂಗಳು 500 ರೂ. ನೀಡಲಾಗುತ್ತಿದೆ. ಏಪ್ರಿಲ್ ಕಂತು ಬಿಡುಗಡೆ ಮಾಡಲಾಗಿದೆ. ಜತೆಗೆ ರೈತರಿಗೆ ಕಿಸಾನ್ ಸಮ್ಮಾನ್ ಕಂತಿನ ಹಣವನ್ನೂ ಬಿಡುಗಡೆ ಮಾಡಲಾಗಿದೆ.
ಅಧಿಕಾರಿಗಳ ಜತೆ ಸಭೆ: ಪರಿಸ್ಥಿತಿ ಕೈಮೀರುವ ಸಾಧ್ಯತೆಯನ್ನು ಅರಿತ ಪೊಲೀಸ್ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಪೂರಕ ವ್ಯವಸ್ಥೆ ಕೈಗೊಳ್ಳಲು ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಎಸ್ಪಿ ಹಾಗೂ ಪುತ್ತೂರು ಡಿವೈಎಸ್ಪಿ ಮಂಗಳವಾರ ಪುತ್ತೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಗ್ರಾಹಕರಲ್ಲಿ ಉಂಟಾಗಿರುವ ಗೊಂದಲ ದೂರ ಮಾಡಲು ಹಾಗೂ ಬ್ಯಾಂಕ್‌ಗೆ ಬರುವ ಸಂದರ್ಭದಲ್ಲಿ ನಿಯಮ ಪಾಲನೆಗೆ ಒತ್ತು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.