ಮಂಗಳೂರು: ಪುತ್ತೂರು ತಾಲೂಕಿನ ಕಬಕದಲ್ಲಿ ಕಳೆದ 10 ತಿಂಗಳ ಹಿಂದೆ ಕೇರಳ ಮೂಲದ ಮನುಚಂದ್ರ ಮಾಲೀಕತ್ವದ ಬದರಿನಾಥ ಎಂಟರ್ ಪ್ರೈಸಸ್ ಪೆನ್ಸಿಲ್ ತಯಾರಿಕಾ ಸಂಸ್ಥೆಯು ಸ್ವ ಉದ್ಯೋಗ ಸೃಷ್ಟಿಸುವ ನೆಪದಲ್ಲಿ ನೂರಾರು ಜನರಿಂದ 80 ಸಾವಿರ ರೂ. ಪಡೆದು ವಂಚನೆ ಮಾಡಿದೆ. ಈ ಬ್ಲೇಡ್ ಕಂಪನಿಯು ಬಡ ಜನರಿಗೆ ಅಧಿಕ ಬೆಲೆಗೆ ಪೆನ್ಸಿಲ್ ಮಾಡುವ ಮಷಿನ್ ನೀಡಿ ಕೋಟ್ಯಂತರ ರೂಪಾಯಿ ಮೋಸಮಾಡಿದೆ. ಇದರಲ್ಲಿ ಶಾಮೀಲಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್ಐ ಇಂದು ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ಮನುಚಂದ್ರನ ಈ ಬ್ಲೇಡ್ ಕಂಪನಿ ಪುತ್ತೂರಿನಲ್ಲಿ ಮಾತ್ರ ಜನರಿಗೆ ಮೋಸ ಮಾಡಿದೆ. ಮಾತ್ರವಲ್ಲ, ಜಿಲ್ಲೆಯ ಇತರ ನಾಲ್ಕಾರು ಕಡೆಗಳಲ್ಲಿ ಜನರಿಗೆ ಪೆನ್ಸಿಲ್ ತಯಾರಿಕಾ ಮಷಿನ್ ಕೊಟ್ಟು ಅವರಿಂದ ಹಣ ಪಡೆದು ವಂಚನೆ ಮಾಡಿದೆ. ಇದರ ಹಿಂದೆ ಬೃಹತ್ ಜಾಲವೇ ಅಡಗಿದೆ ಎಂದು ಆರೋಪಿಸಿದರು.
ಮಹಿಳೆಯರು, ಮದ್ರಸಾ ಶಿಕ್ಷಕರು ಮುಂತಾದ ಕಡಿಮೆ ಆದಾಯಕ್ಕೆ ದುಡಿಯುವ ಅನೇಕ ಮಂದಿಯನ್ನು ಈ ಬ್ಲೇಡ್ ಕಂಪನಿ ತಮ್ಮ ಮೋಸದ ಜಾಲಕ್ಕೆ ಸಿಲುಕಿಸಿದೆ. ಮನುಚಂದ್ರನ ಸಹಚರನಾದ ಇರ್ಫಾನ್ ಹಾಗೂ ಇತರರು ಕಲರಿಂಗ್ ಮಾಡಿದ ಪೆನ್ಸಿಲ್ಗಳನ್ನು ಖುದ್ದಾಗಿ ತಮ್ಮ ಮನೆಯಲ್ಲಿಯೇ ರೀ ವಾಷ್ ಮಾಡಿ ಮತ್ತೆ ಜನರಿಗೆ ಕೊಡುವ ಪ್ರಯತ್ನ ಮಾಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಈ ವಂಚನಾ ಜಾಲದ ಹಿಂದಿರುವ ಎಲ್ಲರನ್ನೂ ಬಂಧಿಸಿ ತನಿಖೆಗೊಳಪಡಿಸಿ ಜನರಿಗೆ ನ್ಯಾಯಕೊಡಿಸುವ ಕೆಲಸ ಮಾಡಬೇಕಾಗಿದೆ ಎಂದು ಬಿ.ಕೆ.ಇಮ್ತಿಯಾಜ್ ಪೊಲೀಸ್ ಇಲಾಖೆಯನ್ನ ಒತ್ತಾಯಿಸಿದರು.