ಬಂಟ್ವಾಳ(ದಕ್ಷಿಣ ಕನ್ನಡ): ಹನಿ ನೀರಿಗಾಗಿ ಸುರಂಗ ತೋಡಿದ ಅಮೈ ಮಹಾಲಿಂಗ ನಾಯ್ಕ ಅವರು, ನೀರಿನ ಮಹತ್ವವನ್ನು ಸಾರಿ ಹೇಳಿದ್ದಾರೆ. ಬೆಟ್ಟವನ್ನು ಕೃಷಿಯೋಗ್ಯವನ್ನಾಗಿಸಿದ ಅವರ ಛಲ, ಯಶಸ್ಸು ಸಮಾಜಕ್ಕೆ ಸ್ಫೂರ್ತಿ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಣ್ಣಿಸಿದ್ದಾರೆ.
ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಅವರ ಮನೆಗೆ ಶನಿವಾರ ಭೇಟಿ ನೀಡಿದ ಶ್ರೀಗಳು, ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಶ್ರೀಕೃಷ್ಣಾನುಗ್ರಹ ಮೂರ್ತಿಯನ್ನು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಶ್ರೀಗಳು, ಮಹಾಲಿಂಗ ನಾಯ್ಕ ಅವರು ಬಹುದೊಡ್ಡ ಸಾಧನೆ ಮಾಡಿದ್ದಾರೆ. ನೀರೇ ಸಿಗುವುದು ದುಸ್ತರ ಎಂಬ ಕಾಲದಲ್ಲಿ ಬೆಟ್ಟವನ್ನು ಕೃಷಿಯೋಗ್ಯವನ್ನಾಗಿಸಿದ್ದಾರೆ. ಹಚ್ಚ ಹಸುರಾಗಿ ಕೃಷಿ ನಳನಳಿಸಲು ಅವರ ಛಲ, ಸಾಧನೆ ಸಮಸ್ಯೆಯನ್ನೂ ಸವಾಲಾಗಿ ಸ್ವೀಕರಿಸಿ ಯಶಸ್ಸು ಪಡೆದದ್ದು ಸಮಾಜಕ್ಕೆ ದೊಡ್ಡ ಸ್ಫೂರ್ತಿ ಎಂದು ಕೊಂಡಾಡಿದರು.
ಸಮಸ್ಯೆಗಳು ಬಂದಾಗ ಬದುಕನ್ನೇ ಕೊನೆಗೊಳಿಸುವವರನ್ನು ನಾವು ಕಾಣುತ್ತೇವೆ. ಆದ್ರೆ ಬದುಕನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಸಿಗುತ್ತದೆ ಎಂಬುದನ್ನು ಮಹಾಲಿಂಗ ನಾಯ್ಕರು ತಮ್ಮ ಸಾಧನೆ ಮೂಲಕ ತೋರಿಸಿದ್ದಾರೆ. ಇಂಥವರನ್ನು ಗುರುತಿಸಿದ ಕೇಂದ್ರ ಸರ್ಕಾರ ಮತ್ತು ಪ್ರಧಾನಿಗೆ ಅಭಿನಂದನೆ. ನೀರನ್ನು ಹನಿ ಹನಿಯಾಗಿ ಸಂಗ್ರಹಿಸುತ್ತಿದ್ದಾರೆ. ನಾವು ಯಾರೊಬ್ಬರು ಸಹ ಹನಿ ನೀರನ್ನೂ ಹಾಳು ಮಾಡದಿರೋಣ ಎಂಬುದನ್ನೂ ಗಮನದಲ್ಲಿರಿಸಿಕೊಳ್ಳಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.
ಮಹಾಲಿಂಗ ನಾಯ್ಕ ಅವರ ತೋಟಕ್ಕೆ ತೆರಳಿದ ಶ್ರೀಗಳು, ಸುರಂಗವನ್ನು ವೀಕ್ಷಿಸಿದರು. ಸುರಂಗ ಕೊರೆದು ನೀರು ಪಡೆದ ಯಶೋಗಾಥೆಯನ್ನು ಮಹಾಲಿಂಗ ನಾಯ್ಕ ಅವರಿಂದ ಕೇಳಿ ತಿಳಿದುಕೊಂಡ ಅವರು, ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಗಿಡ ಮರಗಳನ್ನು ವೀಕ್ಷಿಸಿದರು. ಈ ಸಂದರ್ಭ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ