ಸುಳ್ಯ: ವಾಹನಾ ಚಾಲನಾ ಪರವಾನಿಗೆ ಇಲ್ಲದೇ ಬೈಕ್ ಓಡಿಸಿ ಓರ್ವನ ಸಾವಿಗೆ ಕಾರಣವಾಗಿ ಮಗ ಮಾಡಿದ ತಪ್ಪಿಗೆ ತಾಯಿ ಮೇಲೂ ದೂರು ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ವಾಹನ ಪರವಾನಿಗೆ ಇಲ್ಲದೆ ದೀಕ್ಷಿತ್ ಎಂಬಾತ ವಾಹನ ಚಲಾಯಿಸುತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಬೈಕ್ ಸವಾರನ ತಾಯಿ ಹೆಸರಲ್ಲಿ ನೋಂದಣಿ ಆದ ಕಾರಣ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಬೈಕ್ ಸವಾರನ ತಾಯಿ ಸುನೀತಾ ಅವರನ್ನು ಆರೋಪಿಯನ್ನಾಗಿಸಿ ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ನೂತನ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಚಾಲಕನ ಬಳಿ ಪರವಾನಿಗೆ ಇಲ್ಲದಿದ್ದರೆ, ಆ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ.
ಪ್ರಕರಣದ ಘಟನೆ: ನವೆಂಬರ್ 13ರಂದು ಸಂಜೆ ಸುಳ್ಯದ ಜಾಲ್ಸೂರು ಗ್ರಾಮದ ಅಡ್ಕಾರು ಭಜನಾ ಮಂದಿರದ ಬಳಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಚನಿಯಪ್ಪನಾಯ್ಕ (67) ಎಂಬವರಿಗೆ ದೀಕ್ಷಿತ್ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಚನಿಯಪ್ಪ ಚಿಕಿತ್ಸೆಗೂ ಸ್ಫಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ನವೆಂಬರ್ 14ರಂದು ಪರವಾನಿಗೆ ಇಲ್ಲದ ವಾಹನ ಚಲಾಯಿಸಿದ ಆರೋಪಿ ದೀಕ್ಷಿತ್ ಮತ್ತು ವಾಹನ ನೋಂದಣಿಯಾದವರ ಮೇಲೆ (ತಾಯಿ ಸುನಿತಾ) ಕೂಡ ಪ್ರಕರಣ ದಾಖಲಾಗಿದೆ.