ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸುವ ಜನರ ಪ್ರಮಾಣದಲ್ಲಿ ಭಾರಿ ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಜುಲೈನಲ್ಲಿ ವಿಮಾನ ನಿಲ್ದಾಣದಿಂದ 1,62,667 ಜನರು ಪ್ರಯಾಣಿಸಿದ್ದು, ಇದರಲ್ಲಿ 1,07,455 ದೇಶೀಯ ಮತ್ತು 55,212 ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ಅಕ್ಟೋಬರ್ 31, 2020ರ ವಾಣಿಜ್ಯ ಕಾರ್ಯಾಚರಣೆ ದಿನಾಂಕ (ಸಿಒಡಿ) ದ ಬಳಿಕ ದಾಖಲಾದ ಎರಡನೇ ಅತ್ಯಧಿಕ ಪ್ರಯಾಣಿಕರ ಸಂಖ್ಯೆ ಇದಾಗಿದೆ. ಮೇ 2022ರಲ್ಲಿ ವಿಮಾನ ನಿಲ್ದಾಣದ ಮೂಲಕ 1,67,180 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, ಇದು ಸಿಒಡಿ ನಂತರದ ಅತಿ ಹೆಚ್ಚಿನ ಪ್ರಯಾಣವಾಗಿದೆ.
ಜುಲೈನಲ್ಲಿ ದಾಖಲೆಯ ಪ್ರಯಾಣ: 2023-24ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣದ ಮೂಲಕ 6,20,553 ಜನರು ಪ್ರಯಾಣಿಸಿದ್ದಾರೆ. ಈ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 5,96,516 ಮಂದಿ ಪ್ರಯಾಣಿಸಿದ್ದರು. ಹೀಗಾಗಿ 24,037ರಷ್ಟು ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸಿದಂತಾಗಿದೆ. ಇದರಲ್ಲಿ ಏಪ್ರಿಲ್ನಲ್ಲಿ 1,40,633 ಪ್ರಯಾಣಿಕರು (ಏಪ್ರಿಲ್ 2022ರಲ್ಲಿ 1,46,080 ಜನ), ಮೇನಲ್ಲಿ 1,61,857 (ಕಳೆದ ಸಲ 1,67,180), ಜೂನ್ನಲ್ಲಿ 1,55,396 (ಕಳೆದ ಬಾರಿ 1,39,331) ಮತ್ತು ಜುಲೈನಲ್ಲಿ 1,62,667 (ಕಳೆದ ವರ್ಷ 1,43,925) ಪ್ರಯಾಣಿಕರು ಸೇರಿದ್ದಾರೆ. ಈ ವರ್ಷದ ಜುಲೈನ ಮಾನ್ಸೂನ್ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ಮತ್ತು ಪುಣೆಗೆ ನೇರ ದೇಶೀಯ ಸಂಪರ್ಕ ಸೌಲಭ್ಯವಿದೆ. ಜೊತೆಗೆ, ಇಲ್ಲಿಂದ ರಾಂಚಿಗೆ ಇಂಡಿಗೋ ಹಾಗೂ ಮುಂಬೈಗೆ ಏರ್ ಇಂಡಿಯಾ ವಿಮಾನಗಳು ಪ್ರತ್ಯೇಕ ಸಂಪರ್ಕದ ಮೂಲಕ ಕಾರ್ಯನಿರ್ವಹಿಸುತ್ತಿವೆ. ಅಂತಾರಾಷ್ಟ್ರೀಯವಾಗಿ ಈ ವಿಮಾನ ನಿಲ್ದಾಣದಿಂದ ಅಬುಧಾಬಿ, ಬಕ್ರೇನ್, ದಮ್ಮಾಮ್, ದೋಹಾ ದುಬೈ ಕುವೈತ್ ಮತ್ತು ಮಸ್ಕತ್ಗೆ ನೇರ ವಿಮಾನ ಸೌಲಭ್ಯ ಹಾಗೂ ಕಣ್ಣೂರು ಮೂಲಕ ಬಹರೈನ್ಗೆ ಪ್ರಯಾಣ ಮಾಡಬಹುದಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಅಂತಾರಾಷ್ಟ್ರೀಯ ಸ್ಥಳಗಳಿಗೆ ಹೋಗುವ ವಿಮಾನಗಳಲ್ಲಿ ಏಕಸ್ವಾಮ್ಯ ಹೊಂದಿದೆ. ದೋಹಾ ಅಬುಧಾಬಿ ಮತ್ತು ಕುವೈತ್ಗೆ ಹೆಚ್ಚುವರಿಯಾಗಿ ಜೆಡ್ಡಾ ಮತ್ತು ಶಾರ್ಜಾಗೆ ಹೊಸ ಅಂತಾರಾಷ್ಟ್ರೀಯ ವಿಮಾನಗಳನ್ನು ಪರಿಚಯಿಸಲು ವಿಮಾನ ನಿಲ್ದಾಣವು ಮುಂದಾಗಿದೆ. ಮಂಗಳೂರು ವಿಮಾನ ನಿಲ್ದಾಣವು ವಿಮಾನಯಾನ ಸಂಸ್ಥೆಗಳನ್ನು ಆಕರ್ಷಿಸಲು ಸಕಲ ಪ್ರಯತ್ನ ನಡೆಸುತ್ತಿದೆ. ಲಭ್ಯವಿರುವ ಸ್ಲಾಟ್ಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಅಂತಾರಾಷ್ಟ್ರೀಯ ಮತ್ತು ದೇಶೀಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವತ್ತ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶಿ ಸರಕು ಸಾಗಣೆಯಲ್ಲಿ ಏರಿಕೆ: ಮೇ 1, 2023ರಂದು ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ಕಾರ್ಯರೂಪಕ್ಕೆ ಬಂದಾಗಿನಿಂದ ವಿಮಾನ ನಿಲ್ದಾಣವು ದೇಶೀಯ ಸರಕುಗಳ ನಿರ್ವಹಣೆಯಲ್ಲಿ ಪ್ರಗತಿ ಸಾಧಿಸಿದೆ. ವಿಮಾನ ನಿಲ್ದಾಣವು ಮೇ ತಿಂಗಳಲ್ಲಿ 246 ಟನ್ ವಿವಿಧ ಸರಕುಗಳನ್ನು ನಿರ್ವಹಿಸಿದ್ದು, ಇದು ಜೂನ್ನಲ್ಲಿ 332 ಟನ್ ಮತ್ತು ಜುಲೈನಲ್ಲಿ 376 ಟನ್ಗೆ ಏರಿಕೆ ಆಗಿದೆ. ಒಳಬರುವ ಸರಕು ಹೆಚ್ಚಾಗಿ ಇ ಕಾಮರ್ಸ್ ವಸ್ತುಗಳು, ಸ್ಟೇಷನರಿ ಮತ್ತು ಪೋಸ್ಟ್ ಆಫೀಸ್ ಮೇಲ್ ಒಳಗೊಂಡಿರುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.