ಮಂಗಳೂರು: ಕೊರೊನಾದಿಂದ ಸ್ಥಗಿತಗೊಂಡಿದ್ದ ಶಾಲೆ ಪುನಾರಂಭ ವಿಚಾರದಲ್ಲಿ ಸರ್ಕಾರದಿಂದ ಬರುತ್ತಿರುವ ಗೊಂದಲದ ಹೇಳಿಕೆಗಳು ಪೋಷಕರಿಗೆ ಆತಂಕ ಸೃಷ್ಟಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಭೀತಿಗೊಳಗಾಗಿರುವ ಪೋಷಕರು ಈ ಸಾಲಿನಲ್ಲಿ ಶಾಲೆ ಆರಂಭಿಸುವುದು ಬೇಡ ಎನ್ನುತ್ತಿದ್ದಾರೆ.
ಕೊರೊನಾ ಬಳಿಕ ಶಾಲೆ ಸ್ಥಗಿತಗೊಂಡಿದ್ದರೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಆನ್ಲೈನ್, ಚಂದನ ವಾಹಿನಿ ಮೂಲಕ ಮತ್ತು ವಿದ್ಯಾಗಮದ ಮೂಲಕ ಶಿಕ್ಷಣ ನೀಡುತ್ತಿದೆ. ಇದರಿಂದ ಅನಾನುಕೂಲ ಇದ್ದರೂ ಸದ್ಯದ ಆತಂಕದ ಕಾರಣದಿಂದ ಇದೇ ಮುಂದುವರೆಯಲಿ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಶಾಲೆ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಸರ್ವೆಗಳನ್ನು ನಡೆಸಲಾಗಿಲ್ಲ. ಇಂತಹ ಸಂದರ್ಭದಲ್ಲಿ ಪೋಷಕರು, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯುವುದು, ಸರ್ವೆಗಳನ್ನು ನಡೆಸುವ ಮೂಲಕ ಶಾಲಾರಂಭದ ಬಗ್ಗೆ ಚಿಂತಿಸಬೇಕಾಗಿದೆ ಎನ್ನುತ್ತಾರೆ ಪೋಷಕರು.