ಮಂಗಳೂರು: ಕರ್ನಾಟಕ ಋಣ ಮುಕ್ತ ಕಾಯ್ದೆ ಜಾರಿಯ ಬಳಿಕ ಮೈಕ್ರೋ ಫಿನಾನ್ಸ್ನಲ್ಲಿ ಮಾಡಿದ ಸಾಲ ಮನ್ನಾ ಆಗುತ್ತದೆ ಎಂದು ಹರಿದಾಡುತ್ತಿರುವ ಮಾಹಿತಿಗಳು ತಪ್ಪು ಎಂದು ಅಕ್ಮಿ (AKMI) ಎಕ್ಸಿಕ್ಯೂಟಿವ್ ಸಂಸ್ಥೆಯ (Association of Karnataka Microfinance) ಸದಸ್ಯ ಪಂಚಾಕ್ಷರಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಋಣ ಮುಕ್ತ ಕಾಯ್ದೆ ವ್ಯಾಪ್ತಿಗೆ ಮೈಕ್ರೋ ಫಿನಾನ್ಸ್ ಸಾಲ ಬರುವುದಿಲ್ಲ. ಆದ್ದರಿಂದ ಯಾವುದೇ ಸಾಲ ಮನ್ನಾ ಇಲ್ಲ, ಸಾಲ ಪಡೆದವರು ಮರುಪಾವತಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಕಿರು ಹಣಕಾಸು ಸಂಸ್ಥೆಗಳು (ಮೈಕ್ರೋ ಫಿನಾನ್ಸ್) ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ಮಂದಿ ಈ ಮೂಲಕ ಸಣ್ಣ ಮೊತ್ತದ ಸಾಲ ಪಡೆದು ತಮ್ಮ ಕುಟುಂಬ ನಿರ್ವಹಣೆ ಹಾಗೂ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜನರ ಜೀವನ ಗುಣಮಟ್ಟವನ್ನು ಅಭಿವೃದ್ಧಿಗೊಳಿಸುವುದು, ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವುದು ಮೈಕ್ರೋ ಫೈನಾನ್ಸ್ ನ ಮೂಲ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವ್ಯಕ್ತಿಗಳಿಂದ ತಪ್ಪು ಮಾಹಿತಿ ರವಾನೆಯಾಗಿ ಸಾಲಗಳು ಮರು ಪಾವತಿಯಾಗುತ್ತಿಲ್ಲ ಎಂದು ಹೇಳಿದರು.
ಸಾಲ ಪಡೆದವರು ಸಾಲವನ್ನು ಮರು ಪಾವತಿ ಮಾಡಲೇಬೇಕು. ಇದರಿಂದ ಹೆಚ್ಚು ಮೊತ್ತದ ಸಾಲ ಪಡೆಯಲು ಅರ್ಹರಾಗುತ್ತಾರೆ. ಇದು ತಾತ್ಕಾಲಿಕವಾದ ಸಾಲ ಸೌಲಭ್ಯವಲ್ಲ. ಆದ್ದರಿಂದ ಇಂತಹ ಸೌಲಭ್ಯ ಲಭ್ಯವಾಗುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕೆಂದು ಹೇಳಿದರು.