ಬಂಟ್ವಾಳ: ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಆಕ್ಸಿಜನ್ ಘಟಕ ಸಿದ್ಧವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶಾಸಕ ರಾಜೇಶ್ ನಾಯ್ಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಜೊತೆಯಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ಅವರು, ಆಸ್ಪತ್ರೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಂಟ್ವಾಳದಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಆಗುತ್ತಿದೆ. ಆಸ್ಪತ್ರೆಯಲ್ಲಿ ಈಗ ಬೆಡ್ ಭರ್ತಿ ಆಗಿದ್ದರೂ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ 18 ಹಾಸಿಗೆಗಳು ಖಾಲಿ ಇವೆ ಎಂದರು.
ಕೋವಿಡ್ ಮೂರನೇ ಅಲೆ ತಲುಪದ ರೀತಿಯಲ್ಲಿ ರೋಗವನ್ನು ನಿಯಂತ್ರಣ ಮಾಡಬೇಕಾಗಿದೆ. ಆಸ್ಪತ್ರೆಯಲ್ಲಿ ಸೌಲಭ್ಯ, ಸಿಬ್ಬಂದಿ ಕೊರತೆ ಆಗದಂತೆ ಸ್ಥಳೀಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ತನ್ನ ಅನುದಾನದಿಂದ ಬಂಟ್ವಾಳಕ್ಕೆ ಆಕ್ಸಿಜನ್ ಸೌಲಭ್ಯವಿರುವ ಆಂಬ್ಯುಲೆನ್ಸ್ ಒದಗಿಸಲಾಗುವುದು. ಕೋವಿಡ್ ನಿರ್ವಹಣೆಗಾಗಿ ದ.ಕ.ಜಿಲ್ಲೆಗೆ ರಾಜ್ಯದಿಂದ ಈಗಾಗಲೇ 50 ಕೋಟಿ ರೂ. ಅನುದಾನ ಬಂದಿದೆ. ಜತೆಗೆ ನನ್ನ ಅನುದಾನ ನಿಧಿಯಿಂದಲೂ 2.5 ಕೋಟಿ ರೂ.ಗಳನ್ನು ನೀಡಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಆಕ್ಸಿಜನ್ ಆಂಬ್ಯುಲೆನ್ಸ್ ಕೊರತೆ ನೀಗಿಸುವ ನಿಟ್ಟಿನಲ್ಲಿ ವಾಹನಗಳನ್ನು ನೀಡಲಾಗುತ್ತದೆ ಎಂದರು.