ಬಂಟ್ವಾಳ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಆಯ್ದ ಕಡೆಗಳಲ್ಲಿ ಬ್ಲಡ್ ಆಕ್ಸಿಜನ್ ಸ್ಯಾಚುರೇಶನ್ ಲೆವೆಲ್ ತಿಳಿಯುವ ದೃಷ್ಟಿಯಿಂದ ಸರ್ವೆ ಕಾರ್ಯ ನಡೆಯುತ್ತಿದ್ದು, ಬಂಟ್ವಾಳ ತಾಲೂಕಿನಲ್ಲೂ ಕಳೆದ 6 ದಿನಗಳಿಂದ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ.
ಕೊರೊನಾ ವೈರಸ್ ಹೆಚ್ಚಿನ ತೊಂದರೆ ಕೊಡುತ್ತದೆ ಎಂಬ ದೃಷ್ಟಿಯಿಂದ ಮುಖ್ಯವಾಗಿ ವಯೋವೃದ್ಧರು, ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಹಾಗೂ ಇತರ ಕಾಯಿಲೆ(ಉಸಿರಾಟದ ತೊಂದರೆ)ಗಳಿಂದ ಬಳಲುತ್ತಿರುವವರನ್ನು ಗಮನದಲ್ಲಿರಿಸಿಕೊಂಡು ತಾಲೂಕಿನಲ್ಲಿ ಟಿಹೆಚ್ಒ ಡಾ. ದೀಪಾ ಪ್ರಭು ಅವರ ನೇತೃತ್ವದಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿ, ಪುದು, ಕುರ್ನಾಡು, ಕಲ್ಲಡ್ಕ, ವಿಟ್ಲ, ಮಾಣಿ ವ್ಯಾಪ್ತಿಗಳಲ್ಲಿ ಸರ್ವೆ ಆರಂಭಗೊಂಡಿದೆ.
ಇಲಾಖೆಗೆ 40 ಸಾವಿರ ಮಂದಿಯ ಸರ್ವೆ ನಡೆಸುವ ಗುರಿ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯ ನಡೆಸುತ್ತಿದ್ದಾರೆ. ಆಕ್ಸಿಜನ್ ಸ್ಯಾಚುರೇಶನ್ ಲೆವೆಲ್ 94ರಿಂದ 100 ಸಾಮಾನ್ಯವಾಗಿ ಇರಬೇಕಾಗುತ್ತದೆ. ಇಲ್ಲಿ ಲೆವೆಲ್ 90ಕ್ಕಿಂತ ಕಡಿಮೆ ಇದ್ದರೆ ಅದಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಆಸ್ಪತ್ರೆಗೆ ಕರೆ ತರಲಾಗುತ್ತದೆ. ಮುಖ್ಯವಾಗಿ ಅದು ಕೊರೊನಾ ತೊಂದರೆಯೂ ಆಗಿರಬಹುದೆಂದು ಅವರ ಕೋವಿಡ್ ಟೆಸ್ಟ್ ಕೂಡ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಪ್ರತಿ ಮನೆಗೆ ಭೇಟಿ ನೀಡಿ ಸರ್ವೆ ನಡೆಸುವ ಸಿಬಂದಿ, ತಮ್ಮಲ್ಲಿನ ಪರೀಕ್ಷಾ ಸಾಧನದ ಮೂಲಕ ಲೆವೆಲ್ ಟೆಸ್ಟ್ ನಡೆಸುತ್ತಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದ್ದಾರೆ.