ಮಂಗಳೂರು: ಓರ್ವ ರೋಗಿಯ ಹೃದಯದ ಬೈಪಾಸ್ ಸರ್ಜರಿಯನ್ನು ಒಂದು ಬಾರಿ ಮಾಡಿದರೆ ಅದೇ ರೋಗಿಗೆ ಮತ್ತೊಮ್ಮೆ ಹಾರ್ಟ್ ಸರ್ಜರಿ ನಡೆಸಲು ವೈದ್ಯರುಗಳು ಹಿಂದೇಟು ಹಾಕುತ್ತಾರೆ. ಆದರೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಓರ್ವ ವ್ಯಕ್ತಿಗೆ ನಾಲ್ಕನೆ ಬಾರಿಗೆ ಯಶಸ್ವಿ ತೆರೆದ ಹೃದಯಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.
ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹೃದ್ರೋಗಿಯೊಬ್ಬರಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೇರಳದ ತ್ರಿಶೂರ್ ನ ಉಮರ್ ಎಂಬ 55 ವರ್ಷದ ರೋಗಿ 15 ವರ್ಷಗಳಿಂದ ಎದೆನೋವಿನಿಂದ ಬಳಲುತ್ತಿದ್ದರು. ಇವರಿಗೆ ಬೇರೆ ಬೇರೆ ಆಸ್ಪತ್ರೆಯಲ್ಲಿ ಒಂದು ಬಾರಿ ಆಂಜಿಯೋಪ್ಲಾಸ್ಟಿ ಮತ್ತು ಮೂರು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಇತ್ತೀಚೆಗೆ ಇವರಿಗೆ ಮತ್ತೆ ಹೃದಯ ಸಮಸ್ಯೆ ಕಾಣಿಸಿ ಅವರನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ಪರೀಕ್ಷಿಸಿದ ಆಸ್ಪತ್ರೆಯ ಮುಖ್ಯ ಹೃದಯ ತಜ್ಞ ಡಾ.ಎಂ.ಕೆ ಮೂಸ ಕುಂಞಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.
ಈ ರೋಗಿಗೆ ಈಗಾಗಲೇ ಒಂದು ಬಾರಿ ಆ್ಯಂಜಿಯೋಪ್ಲಾಸ್ಟಿ ಮತ್ತು ಮೂರು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಓರ್ವ ರೋಗಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮಾಡುವುದು ಕ್ಲಿಷ್ಟಕರವಾದದ್ದು. ಈ ರೋಗಿಗೆ ನಾಲ್ಕನೇ ಬಾರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದು ಕೂಡ ಹೃದಯಬಡಿತವನ್ನು ( ಬೀಟಿಂಗ್ ಹಾರ್ಟ್ ಸರ್ಜರಿ) ನಿಲ್ಲಿಸದೆ ಮಾಡಿರುವುದು ವಿಶೇಷ.
ಈ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಈ ರೋಗಿಗೆ ಪದೆ ಪದೆ ಹೃದಯ ರೋಗ ಮರುಕಳಿಸಲು ಕಾರಣವಾಗಿದ್ದ ಅಪಧಮನಿಯ ಮೇಲೆ ಸ್ನಾಯುವಿನ ದಪ್ಪ ಬೆಳವಣಿಗೆಯನ್ನು ಗಮನಿಸಿದ ಡಾ. ಮೂಸ ಕುಂಞಿ ಅವರು ಹೃದಯ ಸ್ನಾಯುವಿನ ಸುಮಾರು 3 ಸೆ.ಮೀ ಉದ್ಧದ ಮಾಂಸ ಖಂಡವನ್ನು ಯಶಸ್ವಿಯಾಗಿ ಕತ್ತರಿಸಿದ್ದಾರೆ. ನಾಲ್ಕನೆ ಬಾರಿಗೆ ತೆರೆದ ಹೃದಯ ಚಿಕಿತ್ಸೆ, ಬೀಟಿಂಗ್ ಹಾರ್ಟ್ ಸರ್ಜರಿ ಮತ್ತು 3 ಸೆ. ಮೀ ಉದ್ದದ ಮಾಂಸಖಂಡ ಕತ್ತರಿಸುವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ದಕ್ಷಿಣ ಭಾರತದಲ್ಲಿ ಇದೆ ಮೊದಲು ಎನ್ನುತ್ತಾರೆ ವೈದ್ಯ ಡಾ ಎಂ ಕೆ ಮೂಸ ಕುಂಞಿ.
ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..
ಇನ್ನೂ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಅಡ್ವಾನ್ಸ್ ಡ್ ಹಾರ್ಟ್ ಸರ್ಜರಿ ಮತ್ತು ಹಾರ್ಟ್ ಟ್ರಾನ್ಸ್ ಪ್ಲಾಂಟ್ ಗೆ ಕೇಂದ್ರ ಮಾಡಲಾಗಿದ್ದು, ಇದರಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಲಿದೆ. ಕ್ಲಿಷ್ಟಕರ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ಹಿಂದೆ ಬೇರೆ ಕಡೆ ರೆಫರ್ ಮಾಡಲಾಗುತ್ತಿತ್ತು. ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಪರಿಣಿತರಾದ ರೈಲ್ವೆ ಆಸ್ಪತ್ರೆಯ ನಿರ್ದೇಶಕರಾಗಿದ್ದ ಹಿರಿಯ ಹೃದಯ ತಜ್ಞ ಎಂ ಕೆ ಮೂಸ ಕುಂಞಿ ಅವರು ಇಂಡಿಯಾನ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದು ಅವರ ನೇತೃತ್ವದಲ್ಲಿ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಯಿತು ಎನ್ನುತ್ತಾರೆ ಇಂಡಿಯಾನ ಆಸ್ಪತ್ರೆ ನಿರ್ದೇಶಕ ಡಾ ಯೂಸುಫ್ ಕುಂಬ್ಳೆ.
ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಬಳಿಕ ರೋಗಿ ಸಂಪೂರ್ಣ ಚೇತರಿಸಿಕೊಂಡಿದ್ದು 3 ಸೆ. ಮೀ ಉದ್ದದ ಮಾಂಸಖಂಡ ಕತ್ತರಿಸಿದ ಪರಿಣಾಮ ಮುಂದೆ ಅವರಿಗೆ ಹೃದಯ ಸಮಸ್ಯೆ ಪದೇ ಪದೇ ಬರುವುದು ತಪ್ಪಲಿದೆ ಎನ್ನುತ್ತಾರೆ ವೈದ್ಯರು. ಒಟ್ಟಿನಲ್ಲಿ ರೆಡೋ ಬೈಪಾಸ್ ಸರ್ಜರಿ ಮೂಲಕ ಮಂಗಳೂರಿನ ಇಂಡಿಯಾನ ಆಸ್ಪತ್ರೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲು ಯಶಸ್ವಿಯಾಗಿದೆ.