ಪುತ್ತೂರು (ದಕ್ಷಿಣ ಕನ್ನಡ) : ಪೊಲೀಸ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಮೃತಪಟ್ಟ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿ - ಮೈಸೂರು ಹೆದ್ದಾರಿಯಲ್ಲಿನ ಮಸೀದಿಯ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.
ಬೈಕ್ನಲ್ಲಿ ತೆರಳುತ್ತಿದ್ದ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉದ್ಯೋಗಿ ಲಕ್ಷಣ ನಾಯ್ಕ ಬಿ. (50) ಎಂಬುವರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತರಾಗಿದ್ದಾರೆ. ಅಪಘಾತದ ತಕ್ಷಣ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತಕ್ಕೊಳಗಾದ ಪೊಲೀಸ್ ವಾಹನವು ದಕ್ಷಿಣ ಕನ್ನಡ ಜಿಲ್ಲೆಯ ಡಿಆರ್ ವಿಭಾಗಕ್ಕೆ ಸೇರಿದ್ದಾಗಿದೆ. ಪೊಲೀಸ್ ವಾಹನದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಸಂಚರಿಸುತ್ತಿದ್ದಾಗಲೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೆಳ್ಳಾರೆಯಲ್ಲಿ ಕಳೆದ ವರ್ಷ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳ ತಂಡ ಪುತ್ತೂರು, ಸುಳ್ಯ, ಬಂಟ್ವಾಳ ಕಡೆಗಳಿಗೆ ಆಗಾಗ ಬರುವ ಸಮಯದಲ್ಲಿ ಹೆಚ್ಚಾಗಿ ಇಲ್ಲಿನ ಡಿಆರ್ ವಿಭಾಗದ ಪೊಲೀಸ್ ವಾಹನವನ್ನು ಬಳಸಿಕೊಳ್ಳುತ್ತಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 304(ಎ) ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಛತ್ತೀಸಗಢ: ಪತ್ನಿಯ ಕೊಂದು ತುಂಡರಿಸಿ ನೀರಿನ ಟ್ಯಾಂಕ್ನಲ್ಲಿ ಹಾಕಿದ ಕ್ರೂರಿ!