ಪುತ್ತೂರು (ದಕ್ಷಿಣಕನ್ನಡ): ತೈಲ ಬೆಲೆ ಏರಿಕೆ ವಿರೋಧಿಸಿ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ದೇಶದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೆ ಏರಿಕೆಯಾಗುತ್ತಿರುವ ರೀತಿಯಲ್ಲೇ ತೈಲ ಬೆಲೆ ಏರಿಕೆಯಾಗುತ್ತಿದೆ. ಕಳೆದ 26 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ನಯಾ ಪೈಸೆ ಕಡಿಮೆಯಾಗದೆ ಬೆಲೆ ಏರಿಕೆಯಾಗುತ್ತಲೇ ಸಾಗುತ್ತಿದೆ ಎಂದರು.
ಮಾನವನ ಮನುಷ್ಯತ್ವ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಕೊಡಲಿಯೇಟು ನೀಡುತ್ತಿದೆ. 60 ವರ್ಷದ ದೀರ್ಘ ಇತಿಹಾಸದ ಕಾಂಗ್ರೆಸ್ ಆಡಳಿತದಲ್ಲಿ ಪೆಟ್ರೋಲ್‌ಗೆ ಹೆಚ್ಚೆಂದರೆ 60 ರೂಪಾಯಿ ಇತ್ತು. ಆದರೆ ಮೋದಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ 90 ರೂಪಾಯಿ ಸಮೀಪಕ್ಕೆ ಬಂದಿದ್ದು, ಪ್ರತಿಭನಟೆನೆ ಅನಿವಾರ್ಯತೆ ಇದೆ. ಬಡವರು, ರಿಕ್ಷಾ ಚಾಲಕರು, ಕಾರ್ಮಿಕರ ಬದುಕು ಅಧೋಗತಿಯತ್ತ ಸಾಗುತ್ತಿದೆ.
165 ದೇಶಗಳಿಗೆ ಪ್ರವಾಸ ಕೈಗೊಂಡಿದ್ದರೂ ಅವರೆಲ್ಲಾ ವಿರೋಧಿಗಳಾಗಿದ್ದಾರೆ. ನೇಪಾಳ, ಭೂತಾನ್ನಂತಹ ಸಣ್ಣ-ಸಣ್ಣ ರಾಷ್ಟ್ರಗಳೂ ದೇಶದ ಮೇಲೆ ದಂಡೆತ್ತಿ ಬರುತ್ತಿದ್ದು, ಸುಮಾರು ಏಳೆಂಟು ರಾಷ್ಟ್ರಗಳು ವಿರೋಧಿಗಳಾಗುತ್ತಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಎಡವಿದೆ. ಅಹದಾಬಾದ್‌ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ಕಾರ್ಯಕ್ರಮ ನಡೆಸಿರುವುದಲ್ಲದೆ ಸಂಬಂಧಿಕರು, ಬಂಡವಾಳಶಾಹಿಗಳನ್ನ ದೇಶಕ್ಕೆ ಕರೆಸಿಕೊಳ್ಳಲು ವಿಳಂಬ ಮಾಡಿರುವುದರಿಂದಾಗಿ ಕೊರೊನಾ ಸೋಂಕು ಇಂದು ಕೈಮೀರಿ ಹೋಗುತ್ತಿದೆ. ಮೋದಿ ತಮ್ಮ ಸಿದ್ಧಾಂತವನ್ನು ತಿದ್ದುಕೊಳ್ಳದಿದ್ದರೆ ದೇಶಕ್ಕೆ ಅಪಾಯವಿದೆ ಎಂದರು.