ಮಂಗಳೂರು: ತಮ್ಮವರೆನ್ನಲು ಯಾರೂ ಇಲ್ಲದೆ ಮಳೆಗೆ ಟಾರ್ಪಲ್ ಮೂಲಕ ಆಶ್ರಯ ಪಡೆದು ನಗರದ ರಸ್ತೆ ಬದಿ ಕುಳಿತಿದ್ದ ವ್ಯಕ್ತಿಯ ಬಗ್ಗೆ ಪ್ರಕಟಿಸಲಾದ ವರದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷಣ ಪ್ರತಿಕ್ರಿಯಿಸಿದೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ನಿನ್ನೆ (ಜೂನ್ 13 ರಂದು) ಈಟಿವಿ ಭಾರತ್ ಪ್ರತಿನಿಧಿ ವರದಿ ಮಾಡಲು ತೆರಳುವಾಗ ನಗರದ ಬಜಾಲ್ ರೈಲ್ವೆ ಅಂಡರ್ ಪಾಸ್ ಬಳಿ ಸತತವಾಗಿ ಸುರಿಯುತ್ತಿದ್ದ ಮಳೆಯ ಮಧ್ಯೆ ವ್ಯಕ್ತಿಯೊಬ್ಬ ಯಾವುದೇ ವ್ಯವಸ್ಥೆಗಳಿಲ್ಲದೆ ಟಾರ್ಪಲ್ ಅಡಿಯಲ್ಲಿ ಆಶ್ರಯ ಪಡೆಯುತ್ತಿದ್ದ. ಈ ಬಗ್ಗೆ 'ಸುರಿಯುವ ಮಳೆಯಲ್ಲಿ ಟಾರ್ಪಲ್ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಅನಾಥ' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.
ಈ ವರದಿಯನ್ನು ಗಮನಿಸಿದ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಗಾಳಿ ಮಳೆಗೆ ಯಾವುದೇ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಅನಾಥ ವ್ಯಕ್ತಿಯನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಮೊದಲು ಆ ವ್ಯಕ್ತಿಗೆ ಚಿಕಿತ್ಸೆಯ ಅಗತ್ಯವಿದೆ. ಅವರು ಸ್ವಲ್ಪ ಮಾನಸಿಕ ಅಸ್ವಸ್ಥರಾಗಿರುವುದರಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸದ್ಯ ಚಿಕಿತ್ಸೆ ನಡೆಯುತ್ತಿದ್ದು, ಜಿಲ್ಲಾಡಳಿತ ಮುಂದಿನ ವ್ಯವಸ್ಥೆ ಮಾಡಲಿದೆ.