ಮಂಗಳೂರು: ಖೋಟಾ ನೋಟು ಚಲಾವಣೆ ದಂಧೆಯಲ್ಲಿ ನಿರತರಾಗಿದ್ದ ಆರೋಪದಲ್ಲಿ ಇಬ್ಬರು ನೆಲ್ಯಾಡಿ ನಿವಾಸಿಗಳ ಸಹಿತ ನಾಲ್ವರನ್ನು ಸಕಲೇಶಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಸುಲೈಮಾನ್(37) ನೆಲ್ಯಾಡಿ ಗ್ರಾಮದ ಪಡುಬೆಟ್ಟು ನಿವಾಸಿ ಇಲಿಯಾಸ್(38), ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರದ ಕಿರಣ್(20), ಹೊಳೆನರಸಿಪುರ ತಾಲೂಕು ನಗರನಹಳ್ಳಿ ಗ್ರಾಮದ ಸಂತೋಷ್(25)ಬಂಧಿತ ಆರೋಪಿಗಳು.
ಬಂಧಿತರಿಂದ 500 ರೂ. ಮುಖಬೆಲೆಯ 3 ನೋಟುಗಳು, 2000 ರೂ. ಮುಖಬೆಲೆಯ 5 ನಕಲಿ ನೋಟುಗಳು, 100 ರೂ. ಮುಖಬೆಲೆಯ 15 ನೋಟುಗಳ ಸಹಿತ ಒಟ್ಟು 13 ಸಾವಿರ ರೂ. ಮೌಲ್ಯದ ಖೋಟಾನೋಟು ಮತ್ತು ನೋಟು ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವೇಳೆ ಮಾರನಹಳ್ಳಿ ಬಳಿ ಪೊಲೀಸರು ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದಾಗ, ವಾಹನದ ದಾಖಲೆ ನೀಡಲು ಹಿಂದೇಟು ಹಾಕಿ ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಹನ ತಪಾಸಣೆ ನಡೆಸಿದಾಗ ನೋಟುಗಳು ಪತ್ತೆಯಾಗಿದ್ದವು. ಹೆಚ್ಚಿನ ತನಿಖೆ ನಡೆಸಿ ಬಳಿಕ ಖದೀಮರ ಬಳಿ ಕಲರ್ ಪ್ರಿಂಟರ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಮಾರನಹಳ್ಳಿಯ ಹೋಟೆಲ್ ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದಾರೆಂದು ಹೇಳಲಾಗ್ತಿದೆ. ಬಂಧನಕ್ಕೊಳಗಾಗಿರುವ ಆರೋಪಿ ಸುಲೈಮಾನ್ 10ವರ್ಷಗಳ ಹಿಂದೆ ನೆಲ್ಯಾಡಿ ಹೊಸಮಜಲು ಎಂಬಲ್ಲಿ ವೈದ್ಯ ಶಾಸ್ತ್ರಿಯವರ ಮನೆಯ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಸುಲೈಮಾನ್ ವಿರುದ್ಧ ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.