ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆಯ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಯಾವುದೇ ರೀತಿಯಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗಿಲ್ಲ. ಜನರಲ್ಲಿ ಯಾವುದೇ ಆತಂಕ ಬೇಡ ಎಂದರು.
ಈ ಬಗ್ಗೆ ತಕ್ಷಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರುಗಳ ನೇತೃತ್ವದಲ್ಲಿ ಸಭೆ ನಡೆಸಿರುವ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಜಿಲ್ಲೆಯ ಆಸ್ಪತ್ರೆಗಳ ಆಕ್ಸಿಜನ್ ವ್ಯವಸ್ಥೆ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ ಬಳ್ಳಾರಿ ಹಾಗೂ ಪಾಲಕ್ಕಾಡ್ನಿಂದ ದಿನಕ್ಕೆ 25 ಟನ್ ಆಕ್ಸಿಜನ್ ಸರಬರಾಜು ಆಗುತ್ತಿದ್ದು, ಈವರೆಗೆ ಕೊರತೆಯಾಗಿಲ್ಲ. ಆದರೆ, ಪಾಲಕ್ಕಾಡ್ ನಿಂದ ಬರುವ ಆರು ಟನ್ ಆಕ್ಸಿಜನ್ ವಿಳಂಬವಾಗದಂತೆ ಕ್ರಮ ವಹಿಸಲು ರಾಜ್ಯಕ್ಕೆ ಮನವಿ ಮಾಡಲಾಗಿದೆ.
ಸದ್ಯ ಜಿಲ್ಲೆಯಲ್ಲಿ 430 ಮಂದಿ ಆಕ್ಸಿಜನ್ ಯುಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯು, ವೆಂಟಿಲೇಟರ್ಗಳಲ್ಲಿ 200ಕ್ಕೂ ಅಧಿಕ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುವರಿ ವೆಂಟಿಲೇಟರ್ ಜೋಡಣೆಗೆ ತುರ್ತು ಕ್ರಮವಹಿಸಲಾಗಿದೆ. ನೂತನ ಆಕ್ಸಿಜನ್ ಉತ್ಪಾದನಾ ಘಟಕವೂ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಎದುರಿಸಲು ಸಾಕಷ್ಟು ಕ್ರಮ ವಹಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.