ಮಂಗಳೂರು: ಕಾನೂನಿನ ಮುಂದೆ ಎಲ್ಲರೂ ಒಂದೇ, ಯಾರೂ ಉನ್ನತ ವ್ಯಕ್ತಿಗಳಲ್ಲ. ನಮಗೆ ಅವರು ಡ್ರಗ್ಸ್ ಸ್ಮಗ್ಲರ್ಗಳು ಅಷ್ಟೇ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಪಿಗಳು ಡ್ರಗ್ಸ್ ಸಾಗಾಟಗಾರರೆಂದು ತಿಳಿದು ಬಂದರೆ ಕಾನೂನು ಪ್ರಕಾರ ಬಂಧನ ಖಂಡಿತಾ ಆಗುತ್ತದೆ. ಆ ಬಳಿಕ ತನಿಖೆ ನಡೆಯುತ್ತದೆ. ಅವರ ಮೇಲೆ ಜಾಮೀನು ಸಿಗದ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಸಿಂಥೆಟಿಕ್ ಡ್ರಗ್ಸ್ಗಳು ಗಾಂಜಾಗಿಂತಲೂ ಅಪಾಯಕಾರಿ. ಅದರ ಪತ್ತೆ ಹಚ್ಚುವಿಕೆ ಬಹಳ ತ್ರಾಸದಾಯಕವಾಗಿದ್ದು, ಮಾತ್ರೆಗಳ ತರಹ ಇರೋದರಿಂದ ಡ್ರಗ್ಸ್ ಅನ್ನೋದೆ ಗೊತ್ತಾಗುವುದಿಲ್ಲ. ಹೆರಾಯಿನ್ ಗ್ರಾಂ ಲೆಕ್ಕದಲ್ಲಿ ಬರೋದ್ರಿಂದ ಅದರ ಪತ್ತೆ ಹಚ್ಚುವ ವಿಧಾನವೂ ಅಷ್ಟೊಂದು ಸುಲಭವಲ್ಲ. ಹಾಗಾಗಿಯೇ ಅದಕ್ಕೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಡ್ರಗ್ಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಬಹಳಷ್ಟು ಕಾಲದಿಂದ ಹೇಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಕಾರ್ಯಚಟುವಟಿಕೆಗಳನ್ನು ನಡೆಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಹಳಷ್ಟು ಜನರನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ಮಂದಿಯ ಬಂಧನದ ಸಾಧ್ಯತೆ ಇದೆ. ಹಿಂದೆ ಡ್ರಗ್ಸ್ ಸೇವನೆ ಮಾಡುವವರು ಮಾತ್ರ ಸಿಕ್ಕಿ ಬೀಳುತ್ತಿದ್ದರು. ಇದೀಗ ಡ್ರಗ್ಸ್ ಸಾಗಾಟಗಾರರ ಜಾಲವೇ ಸಿಕ್ಕಿಬಿದ್ದಿದೆ ಎಂದು ಪ್ರವೀಣ್ ಸೂದ್ ಹೇಳಿದರು.
ಎನ್ಡಿಪಿಎಸ್ ಕಾಯ್ದೆ ಬಹಳ ಕಠಿಣ ಕಾಯ್ದೆಯಾಗಿದ್ದು, ಕಠಿಣ ಕಾಯ್ದೆಯೆಂದು ನಾವು ಅದನ್ನು ಪಾಲನೆ ಮಾಡದಿದ್ದಲ್ಲಿ ಪ್ರಕರಣ ಬಿದ್ದು ಹೋಗುವ ಸಾಧ್ಯತೆ ಇದೆ. ಹಾಗಾಗಿಯೇ ಎನ್ಡಿಪಿಎಸ್ ಕಾಯ್ದೆಯ ಬಗ್ಗೆ ಸಾಕಷ್ಟು ತರಬೇತಿಯನ್ನೂ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುತ್ತದೆ. ಅಲ್ಲದೇ ನಾರ್ಕೋಟಿಕ್ ಬಗ್ಗೆ ರಾಜ್ಯದ ಎಲ್ಲಾ ಪೊಲೀಸ್ ಇಲಾಖೆಗೂ ಜವಾಬ್ದಾರಿ ಇದೆ. ಇಷ್ಟು ಮಾತ್ರವಲ್ಲ ಸಿಐಡಿ, ಎನ್ಸಿಬಿ ಪೊಲೀಸರೂ ಇದಕ್ಕೆ ಕೈಜೋಡಿಸುವ ಮೂಲಕ ಕೆಲಸ ಮಾಡಲಾಗುತ್ತಿದೆ ಎಂದರು.
ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದೇವೆ. ಮುಂದಿನ ವರ್ಷಗಳಿಂದ ಎವಿಡೆನ್ಸ್ ಕೂಡ ವಿಡಿಯೋ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಧಾನವೂ ಬರಬಹುದು. ಇನ್ನೂ ಹೆಚ್ಚಿನ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡುವ ಬಗ್ಗೆ ಇಂದು ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ಪ್ರವೀಣ್ ಸೂದ್ ಹೇಳಿದರು.